ಪಿಲಿಕುಳ: ದೇಶದ ಪ್ರಥಮ 3ಡಿ ಹೈಬ್ರೀಡ್ ತಾರಾಲಯ ಲೋಕಾರ್ಪಣ

4:04 PM, Thursday, March 1st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

pilukulaಮಂಗಳೂರು: ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಭಾರತದ ಪ್ರಥಮ ‘ಸ್ವಾಮಿ ವಿವೇಕಾನಂದ’ ತ್ರಿಡಿ 8ಕೆ ಹೈಬ್ರೀಡ್ ತಾರಾಲಯವನ್ನು ಇಂದು ರಾಜ್ಯದ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ಲೋಕಾರ್ಪಣೆಗೊಳಿಸಿದರು.

ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ‘ಸ್ವಾಮಿ ವಿವೇಕಾನಂದ ತಾರಾಲಯ’ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮೇಯರ್ ಕವಿತಾ ಸನಿಲ್ ಹಾಗೂ ಶಾಸಕ ಜೆ.ಆರ್. ಲೋಬೋ ಸೇರಿದಂತೆ ಗಣ್ಯರೊಂದಿಗೆ ‘ನಾವು ನಕ್ಷತ್ರಗಳು’ ಎಂಬ ತ್ರಿಡಿ ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಪಿಲಿಕುಳದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗುತ್ತಿದ್ದು, ರಾಜ್ಯಪಾಲರ ಅಂಕಿತವಾದ ಕ್ಷಣ ಪ್ರಾಧಿಕಾರ ಕಾರ್ಯಾರಂಭಿಸಲಿದೆ ಎಂದು ಹೇಳಿದರು. ಪ್ರಾಧಿಕಾರದ ಮೂಲಕ ಪಿಲಿಕುಳವು ಸಮಗ್ರ ಅಭಿವೃದ್ಧಿಯೊಂದಿಗೆ ಆಕರ್ಷಕ ಪ್ರವಾಸಿ ತಾಣವಾಗಿ ಇನ್ನಷ್ಟು ಹೆಚ್ಚಿನ ಬೆಳವಣಿಗೆಯನ್ನು ಕಾಣಲಿದೆ. ಮುಂದಿನ ಎರಡು ತಿಂಗಳೊಳಗೆ ಪಿಲಿಕುಳದೊಳಗೆ ಪ್ರವಾಸಿಗರಿಗೆ ಸಂಚರಿಸಲು ಇಲೆಕ್ಟ್ರಿಕಲ್ ವಾಹನದ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಈ ಹಿಂದಿನ ಸರಕಾರದಿಂದ 11 ಕೋಟಿ ರೂ.ಗಳ ಬಿಡುಗಡೆಯೊಂದಿಗೆ 2013ರವರೆಗೆ ಕಾಗದ ಪತ್ರದಲ್ಲಿದ್ದ 3ಡಿ ತಾರಾಲಯದ ರೂಪುರೇಷೆ ಹಾಗೂ ಅಂದಾಜುವೆಚ್ಚ 2014ರಲ್ಲಿ 24 ಕೋಟಿ ರೂ.ಗಳಿಗೇರಿತ್ತು. ಅದನ್ನು ಸರಕಾರದಿಂದ ಮಂಜೂರು ಮಾಡಿಸಿ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿದ್ದು, ಇದೀಗ 35.69 ಕೋಟಿ ರೂ. ನಿರ್ಮಾಣವಾಗಿದೆ. ತಾರಾಲಯದ ನಿರ್ಮಾಣದ ಅಂದಾಜು ವೆಚ್ಚದಲ್ಲಿನ ಸುಮಾರು 11 ಕೋಟಿ ರೂ.ಗಳ ವ್ಯತ್ಯಾಸದ ಹಣವನ್ನು ಏಕಗಂಟಿನಲ್ಲಿ ಒದಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ನೀಡಿದ್ದರಿಂದ ಈ ಯೋಜನೆ ಸಾಕಾರಗೊಂಡಿದೆ ಎಂದು ಅವರು ತಿಳಿಸಿದರು.

ಶಾಸಕ ಜೆ.ಆರ್. ಲೋಬೋ ಮಾತನಾಡಿ, 1993ರಲ್ಲಿ ಬೋಳುಗುಡ್ಡೆಯಾಗಿದ್ದ ಈ ಪ್ರದೇಶ ಅಂದಿನ ಜಿಲ್ಲಾಧಿಕಾರಿ ಡಾ.ಭರತ್ ಲಾಲಾ ಮೀನಾ ಅವರ ಮಾರ್ಗದರ್ಶನದಲ್ಲಿ ಇಂದು ತಾರಾಲಯದ ಆಕರ್ಷಣೆಯೊಂದಿಗೆ ಜಾಗತಿಕವಾಗಿ ಗುರುತಿಸಿಕೊಳ್ಳುವ ನಿಸರ್ಗಧಾಮವಾಗಿ ಬೆಳೆಯುವಲ್ಲಿ ಸಾಗಿ ಬಂದ ಹಾದಿಯನ್ನು ನೆನಪಿಸಿಕೊಂಡರು.

ಈ ಸಂದರ್ಭ ತಾರಾಲಯದ ಮಾಹಿತಿಯನ್ನು ಒಳಗೊಂಡ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಭಯಚಂದ್ರ ಜೈನ್ ವಹಿಸಿದ್ದರು.

ಶಾಸಕ ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್, ಇಸ್ರೋದ ಸಾರ್ವಜನಿಕ ಸಂಪರ್ಕ ಅಧಿಕಾರಿ ಗುರುಪ್ರಸಾದ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಎಚ್. ಹೊನ್ನೇಗೌಡ, ಡಾ. ಕೆ.ವಿ.ರಾವ್, ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ವಿ. ಪ್ರಸನ್ನ, ಮೂಡಾ ಅಧ್ಯಕ್ಷ ಸುರೇಶ್ ಬಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಕೊಂಕಣಿ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಅಧಿಕಾರಿಗಳಾದ ಪ್ರಭಾಕರ ಶರ್ಮಾ, ಶಿವಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English