ಮಂಗಳೂರು: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಗೆ ರಾಜ್ಯದಲ್ಲಿ ಸಿಗುತ್ತಿರುವ ಜನಬೆಂಬಲದಿಂದ ಬಿಜೆಪಿಗೆ ನಿರಾಸೆಯಾಗಿದ್ದು, ಸೋಲಿನ ಭೀತಿ ಕಾಡಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ, ರಾಜ್ಯ ಕಾಂಗ್ರೆಸ್ ವಕ್ತಾರ ಐವನ್ ಡಿಸೋಜಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಯಾತ್ರೆಗೆ ಅಭೂತಪೂರ್ವ ಜನಬೆಂಬಲ ದೊರೆತಿದೆ. ರಾಜ್ಯ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೂ ಜನ ಮನ್ನಣೆ ದೊರೆತಿದೆ. ಆದರೆ ಮೋದಿಯವರು ಬೆಂಗಳೂರು, ದಾವಣಗೆರೆಯಲ್ಲಿ ನಡೆಸಿದ ಸಭೆಗೆ ನಿರೀಕ್ಷಿತ ಪ್ರಮಾಣದಲ್ಲಿ ಜನೋತ್ಸಾಹ ಕಂಡಿಲ್ಲ. ಇದರಿಂದ ಕಂಗೆಟ್ಟಿರುವ ಬಿಜೆಪಿ ದ್ವೇಷದ ರಾಜಕಾರಣಕ್ಕೆ ಕೈ ಹಾಕಿ ಆ ಮೂಲಕ ಗೆಲುವಿನ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಹುರುಳಿಲ್ಲದ ಆರೋಪ, ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಜನತೆಯ ಹಾದಿ ತಪ್ಪಿಸುತ್ತಿರುವ ಬಿಜೆಪಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಕಾನೂನು ಉಲ್ಲಂಘಿಸುತ್ತಿರುವ ಬಿಜೆಪಿ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದೆ. ಸೆಕ್ಷನ್ ಉಲ್ಲಂಘಿಸುವವರು ಕಾನೂನಿನ ಪಾಠ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಭ್ರಷ್ಟಾಚಾರದಲ್ಲಿ ಜೈಲಿಗೆ ಹೋದ ಬಿಜೆಪಿಯ ಮಾಜಿ ಸಚಿವರು, ನಾಯಕರು, ಮುಖ್ಯಮಂತ್ರಿ ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ. `ಮೋದಿ ಸೀದಾ ರೂಪಯ್ಯ ಸರಕಾರ್, ಕಮೀಷನ್ ಸರಕಾರ್’ ಎಂದೆಲ್ಲಾ ತನ್ನ ಘನತೆಗೆ ತಕ್ಕುದಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಇವರಿಗೆ ಲೋಕಪಾಲ ಮಸೂದೆ ಜಾರಿಗೆ ತರಲು ಆಗಿಲ್ಲ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ. ಇತ್ತೀಚಿಗೆ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲುವು ಇದರ ಸೂಚಕ ಎಂದರು.
ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಯಲ್ಲಿ ಕ್ಯಾನ್ಸರ್‌ದಾಯಕ ಅಂಶಗಳಿದೆ ಎಂದು ಬಿಜೆಪಿ ಸಚಿವರು ಹೇಳುತ್ತಿದ್ದರೂ ಈ ಭಾಗದ ಸಂಸದರು ಆ ಕುರಿತು ಬಾಯಿ ಬಿಡದೆ ಸುಮ್ಮನಿದ್ದಾರೆ. ಅಡಿಕೆ ಬೆಳೆಗಾರರ ಪರ ಇವರಿಗೆ ಕಾಳಜಿ ಇಲ್ಲ. ಅಡಿಕೆ ಬೆಳೆಗಾರರ ಹಿತಾರಕ್ಷಣೆ ಸಂಸ್ಥೆ ಕ್ಯಾಂಪ್ಕೋ ಬರೇ ಲಾಭ ಮಾಡುವುದಕ್ಕಷ್ಟೇ ಸೀಮಿತವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರಾದ ನಾಗೇಂದ್ರ, ಪುನೀತ್ ಶೆಟ್ಟಿ, ಗುರುರಾಜ್, ಮುದಸ್ಸಿರ್ ಕುದ್ರೋಳಿ, ಲಿಯೋ ಡಿ.ಸೋಜಾ, ನಜೀರ್ ಬಜಾಲ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English