ಜೆಡಿಎಸ್ ಅಧಿಕಾರಕ್ಕೆ ಬಂದರೆ ತಜ್ಞ ವೈದ್ಯರೇ ಆರೋಗ್ಯ ಮಂತ್ರಿ: ಕುಮಾರಸ್ವಾಮಿ

4:42 PM, Tuesday, March 6th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kumarswamyಮಂಗಳೂರು: ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಲಾಗುವುದು. ಜತೆಗೆ ವಿಧಾನಸಭೆಗೆ ಆಯ್ಕೆಯಾದ ಸದಸ್ಯರನ್ನು ಹೊರತುಪಡಿಸಿ, ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ತಜ್ಞ ವೈದ್ಯರನ್ನೇ ಆರೋಗ್ಯ ಸಚಿವರ ಸ್ಥಾನ ನೀಡಲಾಗುವುದು. ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ್ದಾರೆ.

ಅವರು ಇಂದು ನಗರದ ಹೊಟೇಲ್‌ನಲ್ಲಿ ಪ್ರಜಾಪ್ರಭುತ್ವ ವೇದಿಕೆ ವತಿಯಿಂದ ಆಯೋಜಿಸಲಾದ ಬುದ್ಧಿಜೀವಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ನವಸಾಕ್ಷರ ಬಡಿಲ ಹುಸೇನ್ ಎಂಬವರು ಕೇಳಿದ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಬಡಿಲ ಹುಸೇನ್‌ ಅವರು, ಸಾಮಾನ್ಯ ಜನರಿಗೆ ಇಂದು ಆರೋಗ್ಯ, ಶಿಕ್ಷಣ ದುಬಾರಿಯಾಗಿದೆ. ಆರೋಗ್ಯ ಸೇವೆಗಳು ಆಸ್ಪತ್ರೆಯಲ್ಲಿ ಉಚಿತವಾಗಿ ಸಿಗುವಂತಾಗಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ನೈಜ ಶಿಕ್ಷಣ ದೊರೆಯುಂತಾಗಬೇಕು ಎಂದು ಆಗ್ರಹಿಸಿದರು.

ಇದಕ್ಕುತ್ತರಿಸಿದ ಕುಮಾರಸ್ವಾಮಿ, ವಿಧಾನಸಭೆಗೆ ಆಯ್ಕೆಯಾದ ಜನಪ್ರತಿನಿಧಿಗಳನ್ನು ಆರೋಗ್ಯ ಮಂತ್ರಿಯನ್ನಾಗಿಸಿದರೆ, ಅವರಿಂದ ಹೆಚ್ಚಿನ ನಿರೀಕ್ಷೆ ಅಸಾಧ್ಯ. ಆದರೆ ಆರೋಗ್ಯ ಕ್ಷೇತ್ರದಲ್ಲಿ ನುರಿತವರಿಂದ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮಟ್ಟ್ಕೆ ಏರಿಸಲು ಸಾಧ್ಯವಾಗಲಿದೆ ಎಂದರು.

ಗಾಡ್ಗೀಳ್ ವರದಿ ಜಾರಿಗೊಳಿಸಬೇಕು, ಕರಾವಳಿಯಲ್ಲಿ ಮರುಳು ಮಾಫಿಯಾದಿಂದ ನದಿಮಾಲಿನ್ಯವನ್ನು ತಡೆಯಬೇಕು ಎಂಬ ಪರಿಸರವಾದಿ ಶಶಿಧರ ಶೆಟ್ಟಿಯವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗಾಡ್ಗೀಳ್ ವರದಿ ಜಾರಿಗೊಳಿಸುವ ಜತೆಗೆ ಅರಣ್ಯ ಭಾಗದಲ್ಲಿ ಮತ್ತೆ ಮರಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲು ತಾವು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕುಮಾರಸ್ವಾಮಿ ಹೇಳಿದರು.

ಸಂವಾದದಲ್ಲಿ ಭಾಗವಹಿಸಿದ್ದ ಖ್ಯಾತ ಮೂಳೆತಜ್ಞ ಡಾ. ಶಾಂತಾರಾಮ ಶೆಟ್ಟಿ, ಕೆಲವೇ ತಿಂಗಳಲ್ಲಿ ಮುಖ್ಯಮಂತ್ರಿ ಆಗಲಿರುವ ಕುಮಾರಸ್ವಾಮಿ ಎಂಬುದಾಗಿ ತಮ್ಮ ಮಾತುಗಳನ್ನು ಆರಂಭಿಸಿದರು. ಯಾವ ಸರಕಾರ ಉತ್ತಮ ವ್ಯಕ್ತಿಗಳನ್ನು ಸೃಷ್ಟಿಸಬಲ್ಲುದೋ ಅಂತಹ ಸರಕಾರ ನಮ್ಮದಾಗಬೇಕು. ಅಂತಹ ಸರಕಾರವನ್ನು ಕುಮಾರಸ್ವಾಮಿ ನೀಡಬಲ್ಲರು ಎಂದರು.

ಧರ್ಮಗುರುಗಳಾದ ಅಬ್ದುಲ್ ಅಝೀಝ್ ದಾರಿಮಿ ಹಾಗೂ ಫಾ. ಡೆನ್ನಿಸ್ ಮೊರಾಸ್‌ರವರು ಪ್ರಸಕ್ತ ಸಮಾಜದಲ್ಲಿನ ಆತಂಕಗಳ ಬಗ್ಗೆ ಗಮನ ಸೆಳೆದರು.

ಪ್ರಜಾಪ್ರಭುತ್ವ ವೇದಿಕೆಯ ಗೌರವ ಸಲಹೆಗಾರ ಬಿ.ಎಂ. ಫಾರೂಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.

ಸಂವಾದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್, ರಮಣ್ ಕಾರ್ಯಕ್ರಮ ನಿರೂಪಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಯುನಿಟಿ ಆರೋಗ್ಯ ಶಿಕ್ಷಣ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಹಬೀಬ್‌ರ್ರಹ್ಮಾನ್, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ವಿವಿಧ ಧರ್ಮಗುರುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ತಜ್ಞರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಂವಾದ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಲಾವಿದ, ಪರಿಸರವಾದಿ ದಿನೇಶ್ ಹೊಳ್ಳ ಮಾತನಾಡಿ, ನೇತ್ರಾವತಿ ಸೇರಿದಂತೆ ಪಶ್ಚಿಮ ಘಟ್ಟದಲ್ಲಿರುವ ಜಿಲ್ಲೆಯ ಜೀವನದಿಗಳ ಜಲಮೂಲವನ್ನು ಬರಿದಾಗಿಸುವ ಎತ್ತಿನಹೊಳೆ ಯೋಜನೆ ಬಗ್ಗೆ ನಿಲುವನ್ನು ಸ್ಪಷ್ಟಪಡಿಸುವಂತೆ ಕೋರಿಕೊಂಡರು.

ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಎತ್ತಿನಹೊಳೆ ಯೋಜನೆ ಬಗ್ಗೆ ಈ ಹಿಂದೆಯೇ ನಾನು ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ. ಈ ಹಿಂದೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ನಿಲ್ಲಿಸುವುದಾಗಿ ಹೇಳಿದ್ದೆ. ಆದರೆ ಈ ಬಗ್ಗೆ ಉತ್ತರ ಕರ್ನಾಟಕದ ಭಾಗದಲ್ಲಿ ಕೆಲವರು ನನ್ನ ವಿರುದ್ಧ ಅಪಪ್ರಚಾರ ಮಾಡಿ, ನಾನು ಅಲ್ಲಿನ ಜನರ ವಿರುದ್ಧವಾಗಿ ಹೇಳಿಕೆ ನೀಡಿದ್ದೇನೆಂದು ಹೇಳಿದ್ದರು. ಆದರೆ ನಾನು ಈಗಲೂ ಬದ್ಧನಾಗಿದ್ದೇನೆ. ಕೋಲಾರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಅಲ್ಲಿಗೆ ನೀರಿನ ಅಗತ್ಯವಿದೆ. ಅದನ್ನು ಇಲ್ಲಿಂದ ವೈಜ್ಞಾನಿಕವಾಗಿ ಯಾವ ರೀತಿಯಲ್ಲಿ ಹರಿಸಲು ಸಾಧ್ಯ ಎಂಬ ಬಗ್ಗೆ ಉಡುಪಿಯ ಪೇಜಾವರ ಶ್ರೀಗಳು ಹಾಗೂ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಜವಾಬ್ಧಾರಿ ವಹಿಸಬೇಕಾಗಿದೆ. ಆ ಮೂಲಕ ಕರಾವಳಿ ಹಾಗೂ ಉತ್ತರ ಕನಾಟಕದ ಬರ ಪೀಡಿತ ಜಿಲ್ಲೆಗಳಿಗೆ ಪರಿಹಾರವನ್ನು ನಾನು ತಂದು ಕೊಡಲಿದ್ದೇನೆ ಎಂದು ಭರವಸೆ ನೀಡಿದರು.

ಸರಕಾರ ರಚನೆ ಮಾಡುವ ಅಧಿಕಾರ ಸಿಗುವುದು ಜನರಿಂದ. ಹಾಗಾಗಿ ಸರಕಾರ ಹೇಗೆ ರಚನೆ ಮಾಡಬೇಕೆಂಬುದನ್ನು ಮತದಾರರ ಜತೆ ಚರ್ಚಿಸಿ ಮುಖ್ಯಮಂತ್ರಿಯಾದವರು ಮುನ್ನಡೆಯಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಪ್ರತಿನಿಧಿಯಾಗಿ ಎಲ್ಲಾ ಧರ್ಮಗಳಿಗೂ ಮಾನ್ಯತೆ, ರಕ್ಷಣೆಯೊಂದಿಗೆ ತಪ್ಪುಗಳನ್ನು ಸರಿಪಡಿಸಿಕೊಂಡು ಮುನ್ನಡೆಯಬೇಕು. ದಾರಿ ತಪ್ಪಿಸುವವರ ವಿರುದ್ಧ ಕಠಿಣ ಕ್ರಮಗಳಾಗಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಿಂದಲೇ ಹೊಸ ಬದಲಾವಣೆಗೆ ಚಿಂತನೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಂವಾದದಲ್ಲಿ ಉಪಸ್ಥಿತರಿದ್ದ ವಿವಿಧ ಧರ್ಮಗಳ ಧರ್ಮಗುರುಗಳು, ತಜ್ಞರು ಆರಂಭದಲ್ಲಿ ಮಾತನಾಡಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದರು.ಕೆಲವರು ಸಂವಿಧಾನ ಬದಲು ಮಾಡಲು ಹೊರಟಿದ್ದಾರೆ. ಆದರೆ ಡಾ. ಅಂಬೇಡ್ಕರ್ ನೇತೃತ್ವದ ತಂಡ ದೇಶಕ್ಕೆ ಭದ್ರವಾದ ಸಂವಿಧಾನ ನೀಡಿ ಶಕ್ತಿ ತುಂಬಿದ್ದಾರೆ. ಅದನ್ನು ಬದಲು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಆಡಳಿತ ನಡೆಸುವವರು, ಯಾವುದೇ ರೀತಿಯ ಅಹಿತಕರ ಘಟನೆಗಳ ಸಂದರ್ಭ ಆಯಾ ಕ್ಷೇತ್ರದ ಪ್ರಮುಖರನ್ನು ಒಟ್ಟಾಗಿಸಿ ತಕ್ಷಣ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಈ ರೀತಿಯ ಬದಲಾವಣೆಯನ್ನು ತಾನು ಮಾಡಲಿದ್ದೇನೆ. ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲ್ಲುತ್ತೇನೆಂಬ ಭ್ರಮೆ ಇಲ್ಲ. ಆದರೆ ಜನರ ಮೇಲೆ ವಿಶ್ವಾಸವಿದೆ. ದ.ಕ. ಜಿಲ್ಲೆಯ ಜನರು 2 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ವಿಶ್ವಾಸವಿದೆ ಎಂದವರು ಹೇಳಿದರು.

ಗೋರಕ್ಷಣೆ ಕುರಿತಂತೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಗೋ ರಕ್ಷಕರೆಂದು ಹೇಳುವವವರಿಗೆ ಒಂದೊಂದು ಹಸು ನೀಡೋಣ. ಅವರು ಅದನ್ನು ತಮ್ಮ ಮನೆಗಳಲ್ಲಿ ಸಾಕಲು ತಯಾರಿದ್ದಾರೆಯೇ ನೋಡೋಣ. ಆಹಾರ ಪದ್ಧತಿಯಲ್ಲಿ ವಿಭಿನ್ನತೆ ಇರಬಹುದು. ಆದರೆ ಈ ಬಗ್ಗೆ ವಿನಾಕಾರಣ ಚರ್ಚೆ ಸರಿಯಲ್ಲ ಎಂದವರು ಹೇಳಿದರು.

ಕರಾವಳಿಯಲ್ಲಿ ಕೋಮು ಗಲಭೆಗೆ ಮುಖ್ಯ ಕಾರಣ, ಇಲ್ಲಿ ಸುಮಾರು 30 ವರ್ಷಗಳಿಂದ ಬೇರೂರಿರುವ ಪೊಲೀಸ್ ಅಧಿಕಾರಿಗಳು. ಅವರನ್ನು ಇಲ್ಲಿಂದ ಖಾಲಿ ಮಾಡಬೇಕು. ಗೂಂಡಾಗಳು- ಪೊಲೀಸರು ರಾತ್ರಿ ಊಟಕ್ಕೆ ಸೇರುತ್ತಾರೆ. ಇದೆಲ್ಲವೂ ನನಗೆ ತಿಳಿದಿದೆ. ಇಲ್ಲಿನ ಅಲ್ಪಸಂಖ್ಯಾತರಿಗೆ ರಾಷ್ಟ್ರ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಆತಂಕ, ಭಯವಿದೆ. ಆದರೆ ಅಂತಹ ಭಯದ ವಾತಾವರಣಕ್ಕೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English