ಮಂಗಳೂರು ಮೇಯರ್ ಅಭ್ಯರ್ಥಿ ಆಯ್ಕೆ ಬಿಕ್ಕಟ್ಟು ಅಂತ್ಯ: ಅಭ್ಯರ್ಥಿಯ ಹೆಸರು ಪ್ರಕಟ

10:55 AM, Thursday, March 8th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

bhasker-moilyಮಂಗಳೂರು: ಮಹಾನಗರ ಪಾಲಿಕೆಯ ಮುಂದಿನ ಸಾಲಿನ ಮೇಯರ್ ಹುದ್ದೆಯ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಗೊಂದಲ ಕೊನೆಗೂ ಮುಕ್ತಾಯ ಕಂಡಿದ್ದು, ಹಿರಿಯ ಕಾರ್ಪೊರೇಟರ್ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಪ ಮೇಯರ್ ಹುದ್ದೆಗೆ ಅಭ್ಯರ್ಥಿಯಾಗಿ ಮುಹಮ್ಮದ್ ಕುಂಜತ್ತಬೈಲ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಇಂದು ಬೆಳಗ್ಗೆ 7 ಗಂಟೆಯಿಂದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಕಾರ್ಪೊರೇಟರ್‌ಗಳನ್ನು ಹೊರಗಿಟ್ಟು ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯ್ದಿನ್ ಬಾವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತ್ರ ಭಾಗವಹಿಸಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಭಾಸ್ಕರ ಮೊಯ್ಲಿ ಅವರ ಹೆಸರನ್ನು ಅಭ್ಯರ್ಥಿಯನ್ನಾಗಿ ತೀರ್ಮಾನಿಸಲಾಯಿತು.

ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಕಗ್ಗಂಟಾಗಿದ್ದ ಮೇಯರ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಗೆ ತೆರೆಬಿದ್ದಿದೆ. ನಿರೀಕ್ಷೆಯಂತೆ ಮೇಯರ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ, ಸಚಿವ ರಮಾನಾಥ ರೈ ಅವರ ಬೆಂಬಲ ಹೊಂದಿದ್ದ ಭಾಸ್ಕರ ಮೊಯ್ಲಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಉಪ ಮೇಯರ್ ಅಭ್ಯರ್ಥಿಯಾಗಿ ಮುಹಮ್ಮದ್ ಕುಂಜತ್ತಬೈಲ್ ಆಯ್ಕೆಯಾಗಿದ್ದಾರೆ.

ಸದ್ಯ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿರುವ ಕವಿತಾ ಸನಿಲ್ ಹಾಗೂ ಉಪ ಮೇಯರ್ ರಜನೀಶ್ ಅವರ ಅಕಾರಾವ ಇಂದು ಕೊನೆಗೊಳ್ಳಲಿದೆ. ಮೇಯರ್ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆಗೆ ಸಂಬಂಸಿ ಕಾಂಗ್ರೆಸ್ ಪಕ್ಷದೊಳಗೆ ಕಳೆದ ಕೆಲ ದಿನಗಳಿಂದ ಬಾರೀ ಲಾಬಿ ನಡೆಯುತ್ತಿತ್ತು. ಈ ಸಂಬಂಧ ಬುಧವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಶಾಸಕರು ಹಾಗೂ ಮನಪಾ ಸದಸ್ಯರ ಸಭೆ ನಡೆದಿತ್ತು. ಸಭೆಯಲ್ಲಿ ಅಭ್ಯರ್ಥಿ ಆಯ್ಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಹೈಕಮಾಂಡ್ ತೀರ್ಮಾನಕ್ಕೆ ಬಿಡಲಾಗಿದೆ. ಅದರಂತೆ ಬುಧವಾರ ರಾತ್ರಿ ಮತ್ತೆ ಸಭೆ ನಡೆದಿದ್ದರೂ ಒಮ್ಮತದ ಅಭ್ಯರ್ಥಿಯನ್ನು ಘೋಷಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಚಿವ, ಶಾಸಕರು ಮತ್ತೆ ಸಭೆ ಸೇರಿ ಮೇಯರ್ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿದ್ದಾರೆ. ನಿಗದಿಯಂತೆ ಇಂದು ಪೂರ್ವಾಹ್ನ 11 ಗಂಟೆಗೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2 ಹಾಗೂ ಸಿಪಿಎಂ, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ 1 ಸ್ಥಾನಗಳನ್ನು ಹೊಂದಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English