ಮೊದಲಿನ ಸ್ನೇಹ ಸಂಬಂಧದತ್ತ ಜನರ ಹೆಜ್ಜೆ

11:58 AM, Friday, March 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

byndoorಬೈಂದೂರು: ನಾವುಂದದ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ಹೆದ್ದಾರಿ ಅಂಡರ್‌ಪಾಸ್ ಬೇಕು, ಅದು ಬೇಡ ‘ಯು’ ತಿರುವು ಸಾಕು ಎಂದು ಸರಿಸುಮಾರು ಎರಡು ವರ್ಷ ನಡೆದ ಹೊಯ್ದಾಟ ಈಗ ಅಂತಿಮವಾಗಿ ಸಮಸ್ಥಿತಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಮೂಲ ಯೋಜನೆಯಂತೆ ಅಂಡರ್‌ಪಾಸ್ ಕಾಮಗಾರಿ ಆರಂ ಭವಾಗಿ, ದಿನದಿಂದ ದಿನಕ್ಕೆ ವೇಗ ಪಡೆಯುವುದರೊಂದಿಗೆ ಎರಡು ತೀವ್ರಾಭಿಪ್ರಾಯಗಳ ನಡುವೆ ಕದನ ವಿರಾಮ ಘೋಷಣೆಯಾಗಿದೆ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ ಇಲ್ಲಿನ ನಾಗರಿಕರು.

ಮೂಲ ಯೋಜನೆಯಂತೆ ಇಲ್ಲಿ ಅಂಡರ್‌ಪಾಸ್ ರಚನೆಯಾಗಬೇಕು. ಆದರೆ ಇದಕ್ಕೆ ಒಂದಷ್ಟು ಜನ ವಿರೋಧ ನಿಲುವು ತಾಳುತ್ತಿದ್ದಂತೆ ಅದಕ್ಕೆ ಪರವಾದ ಇನ್ನೊಂದು ಬಣ ಹುಟ್ಟಿಕೊಂಡಿತು. ಇಬ್ಬಣಗಳೂ ತಮ್ಮವೇ ಆದ ಪ್ರಬಲ ಕಾರಣಗಳನ್ನು ಮುಂದಿಟ್ಟುಕೊಂಡು ಪತ್ರ ವ್ಯವಹಾರ, ನಾಯಕರ ಭೇಟಿ, ಅಧಿಕಾರಿಗಳ ಮೇಲೆ ಒತ್ತಡ, ಸಭೆ, ಪ್ರತಿಭಟನೆ ಮಾರ್ಗ ಅನುಸರಿಸಿದವು. ಹೆದ್ದಾರಿ ಕಾಮಗಾರಿ ಊರನ್ನು ಭೌಗೋಳಿಕವಾಗಿ ಪೂರ್ವ–ಪಶ್ಚಿಮವಾಗಿ ಇಬ್ಭಾಗ ಮಾಡಿದ್ದರೆ, ಅಂಡರ್‌ಪಾಸ್–ಯು ಟರ್ನ್ ಜನರನ್ನು ಇಬ್ಭಾಗ ಮಾಡಿದವು.

ಗ್ರಾಮ ಪಂಚಾಯಿತಿ ಸಭೆ, ಕೆಳ ಹಂತದ ನಾಯಕರ ಮಧ್ಯಸ್ಥಿಕೆ ಫಲ ನೀಡದಿದ್ದಾಗ ಸಂಸದರ ಪ್ರತಿನಿಧಿ ಬಂದು ಉಭಯ ಬಣಗಳ ನಡುವೆ ರಾಜಿಗೆ ಯತ್ನಿಸಿದರು. ಹೊಂದಾಣಿಕೆ ಅಸಾಧ್ಯವಾದಾಗ ಜಿಲ್ಲಾಧಿಕಾರಿಗಳನ್ನು, ಹೆದ್ದಾರಿ ಅಧಿಕಾರಿಗಳನ್ನು ಕರೆತಂದು ಸಾರ್ವಜನಿಕ ಅಭಿಪ್ರಾಯ ಆಲಿಸಿದರು. ಒಂದೊಂದು ಬಾರಿಯೂ ಜಯಾಪಜಯಗಳು ತೂಗುಯ್ಯಾಲೆಯಾಡಿದುವು. ಒಮ್ಮೆ ಒಂದು ಬಣ ಗೆದ್ದಿತು ಎಂದು ಭಾವಿಸಿ ಬೀಗಿದರೆ, ಇನ್ನೊಮ್ಮೆ ಇನ್ನೊಂದು ಬಣ ಜಯ ನಮ್ಮದಾಯಿತು ಎಂದು ಘೋಷಿಸಿಕೊಂಡಿತು.

ಈ ನಡುವೆ ಸ್ಥಗಿತಗೊಂಡ ಕಾಮ ಗಾರಿ ಆಡಳಿತಾತ್ಮಕ ಸಮಸ್ಯೆ ಸೃಷ್ಟಿಸಿತು. ಹೆದ್ದಾರಿ ಪ್ರಾಧಿಕಾರ ಯೋಜನೆಯಂತೆ ಕೆಲಸ ನಡೆಸದೆ ವಿಳಂಬ ಮಾಡುತ್ತಿರುವ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡು ದಂಡ ವಿಧಿಸುವ ಎಚ್ಚರಿಕೆ ನೀಡಿತು. ಕಾಮಗಾರಿಗೆ ಅಡ್ಡಿಯಾಗದಂತೆ ಪೊಲೀಸ್ ಬೆಂಬಲ ಒದಗಿಸುವಂತೆ ಜಿಲ್ಲಾಧಿಕಾರಿಗೆ ತಾಕೀತು ಮಾಡಿತು. ಗುತ್ತಿಗೆದಾರರು ಕಾಮಗಾರಿ ಕಣಕ್ಕಿಳಿದರು. ಅದರೊಂದಿಗೆ ಎರಡು ವರ್ಷಗಳ ಕಾಲ ಮತ್ತಮತ್ತೆ ಸುದ್ದಿ ಮಾಡಿದ ಮಿನಿಕದನ ಅಂತ್ಯಗೊಂಡಿತು ಎನ್ನುತ್ತಾರೆ ಸ್ಥಳೀಯರು.

ಇನ್ನೇನು ಒಂದೆರಡು ತಿಂಗಳಲ್ಲಿ ಎರಡೂ ಬಣಗಳ ಜನ ಅಂಡರ್‌ ಪಾಸ್‌ನಲ್ಲಿ ದಿನನಿತ್ಯ ಸಂಧಿಸಿ ಮೊದಲಿನ ತಮ್ಮ ಸ್ನೇಹ ಸಂಬಂಧಕ್ಕೆ ಮರಳಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English