ಮಂಗಳೂರಿನಲ್ಲಿ ರಾಜ್ಯದ ಮೊದಲ ಕಿಯೋಸ್ಕ್‌ ಆರೋಗ್ಯ ಸೇವೆ ಆರಂಭ

10:13 AM, Monday, March 12th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mangaluruಮಂಗಳೂರು: ಸರ್ಕಾರಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳಿಗೆ ತೆರಳಲು ಸಮಯವಿಲ್ಲವೆಂದು ಗೊಣಗುವ ಪ್ರಮೇಯ ಇನ್ನಿಲ್ಲ. ಕಾರಣ ನಗರದ ಜನನಿಬಿಡ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರು, ಬಡ ಜನರು ಆರೋಗ್ಯ ಸೇವೆಯನ್ನು ಪಡೆದುಕೊಳ್ಳುವಂತಾಗಲು ರಾಜ್ಯ ಸರ್ಕಾರ ಉಚಿತ ಹೆಲ್ತ್ ಕಿಯೋಸ್ಕ್ ಸೇವೆನ್ನು ಆರಂಭಿಸುತ್ತಿದೆ.

ನಗರ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಆರಂಭಗೊಳ್ಳುತ್ತಿರುವ ಹೆಲ್ತ್ ಕಿಯೋಸ್ಕ್ ರಾಜ್ಯದಲ್ಲೇ ಮೊದಲು. ಈಗಾಗಲೇ ಬೆಂಗಳೂರು ಮತ್ತು ಮೈಸೂರು ಸ್ಲಂ ಪ್ರದೇಶಗಳಲ್ಲಿ ಕಿಯೋಸ್ಕ್ ಸೇವೆ ಇದೆಯಾದರೂ ಅಲ್ಲಿ ನಿರ್ದಿಷ್ಟ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ ಕಿಯೋಸ್ಕ್, ಇಲ್ಲಿ ಪ್ರತ್ಯೇಕವಾಗಿ ಸ್ಥಾಪನೆಯಾಗುತ್ತಿದೆ.

ಬೆಳಗ್ಗೆ 7ರಿಂದ 9 ಹಾಗೂ ಸಂಜೆ 4ರಿಂದ ರಾತ್ರಿ 8 ಗಂಟೆವರೆಗೆ ತೆರೆದಿರುವಂತೆ ಯೋಚಿಸಲಾಗುತ್ತಿದೆ ಎಂದು ಶನಿವಾರ ಕದ್ರಿಯಲ್ಲಿ ಆಯೋಜಿಸಿದ್ದ ಕಿಯೋಸ್ಕ್ ಕೇಂದ್ರದ ಪ್ರಾಯೋಗಿಕ ಪರೀಕ್ಷೆಯ ವೇಳೆ ಆಹಾರ ಸಚಿವ ಯು.ಟಿ.ಖಾದರ್ ತಿಳಿಸಿದರು.

ಜಪ್ಪಿನಮೊಗರು, ಸರಿಪಳ್ಳ, ಕುದ್ರೋಳಿ, ಮೀನಕಳಿಯ, ಕೃಷ್ಣಾಪುರ, ಉಳ್ಳಾಲ ಪುರಸಭೆ ವ್ಯಾಪ್ತಿಯ ತೊಕ್ಕೊಟ್ಟು ಬಸ್ ನಿಲ್ದಾಣ, ಒಳಪೇಟೆಯ ಅಂಬೇಡ್ಕರ್ ಭವನದ ಹತ್ತಿರ, ಕೋಟೆಪುರ ಮತ್ತು ಚೆಂಬುಗುಡ್ಡೆಯಲ್ಲಿ ಹೆಲ್ತ್ ಕಿಯೋಸ್ಕ್ ಸ್ಥಾಪನೆಯಾಗಲಿದೆ. ಮಂಗಳೂರಿನಲ್ಲಿ 4.30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮಾದರಿ ಕಿಯೋಸ್ಕ್‌‌ ಸ್ಥಾಪಿಸಲಾಗುತ್ತಿದೆ. ಪಾಲಿಕೆ ಮತ್ತು ಪುರಸಭೆಯಿಂದ ವಿದ್ಯುತ್ ಹಾಗೂ ನೀರಿನ ಸಂಪರ್ಕ ಒದಗಿಸಲಾಗುವುದು ಎಂದರು.

ಪ್ರತಿ ಕಿಯೋಸ್ಕ್‌‌ನಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಕಾರ್ಯನಿರ್ವಹಿಸಲಿದ್ದಾರೆ. ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರದಲ್ಲಿ ವೈದ್ಯರ ಸೇವೆ ನೀಡಲಾಗುವುದು. ಸದ್ಯ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಸೇವೆ ಇದ್ದು, ಬಳಿಕ ಇಡೀ ದಿನ ಸೇವೆ ಲಭ್ಯವಾಗಲಿದೆ. ರಾಷ್ಟ್ರೀಯ ನಗರ ಆರೋಗ್ಯ ಮಿಷನ್‌‌‌ ಯೋಜನೆಯಡಿ ಈಗಾಗಲೇ ನಗರದ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ತಿಳಿಸಿದರು.

ಪ್ರಸವ ಪೂರ್ವ ಮತ್ತು ಪ್ರಸವ ನಂತರದ ಸೇವೆ, ಚುಚ್ಚು ಮದ್ದು ಸೇವೆ, ಐಯುಸಿಡಿ ಅಳವಡಿಕೆ, ನಿಶ್ಚಯ್ ಕಿಟ್ ಮೂಲಕ ಗರ್ಭಿಣಿ ಎಂದು ಗುರುತಿಸುವುದು, ರಕ್ತ ಹೀನತೆ ಮತ್ತು ಅಪೌಷ್ಟಿಕತೆಯ ಪತ್ತೆ ಹಚ್ಚುವಿಕೆ, ಅಸಾಂಕ್ರಾಮಿಕ ರೋಗಗಳಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಪತ್ತೆ ಹಚ್ಚುವಿಕೆ, ಕ್ಷಯರೋಗ ಪತ್ತೆಹಚ್ಚುವಿಕೆಗೆ ಕಫ ಸಂಗ್ರಹಣೆ, ಮಲೇರಿಯಾ ಪತ್ತೆ ಹಚ್ಚುವಿಕೆಗೆ ರಕ್ತಲೇಪನದ ಸಂಗ್ರಹಣೆ, ಮೂತ್ರ ಪರೀಕ್ಷೆ, ವಿವಿಧ ಕಾಯಿಲೆಗಳ, ಆರೋಗ್ಯ ಕಾರ್ಯಕ್ರಮಗಳ, ಯೋಜನೆಗಳ ಮಾಹಿತಿ ನೀಡುವ ಸೇವೆಗಳು ಇವೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English