ಮಂಗಳೂರು: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿ ತನ್ನ ಸ್ಟಾರ್ ಪ್ರಚಾರಕ ಎಂದು ಬಿಂಬಿಸುತ್ತಾ ಬಂದಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಅವರನ್ನು ಬಳಸಿಕೊಂಡು ಮತ ಪಡೆಯಲು ನಿರ್ಧರಿಸಿದೆ. ಆದರೆ, ಈಗ ಆದಿತ್ಯನಾಥ್ ಅವರು ಮುಗ್ಗರಿಸಿ ಬಿದ್ದಿದ್ದಾರೆ. ಬಿಜೆಪಿಯ ಸ್ಟಾರ್ ಪ್ರಚಾರಕ ಇನ್ನು ಸುಲಭದಲ್ಲಿ ಏಳೋದು ಕಷ್ಟ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಲೇವಡಿ ಮಾಡಿದರು.
ಪುತ್ತೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೂವತ್ತು ವರ್ಷಗಳಿಂದ ಬಿಜೆಪಿಯನ್ನೇ ಗೆಲ್ಲಿಸುತ್ತಾ ಬಂದಿರುವ ಮತ್ತು ಯೋಗಿ ಆದಿತ್ಯನಾಥ್ ಅವರು ಸತತ ಸಂಸತ್ತಿಗೆ ಆಯ್ಕೆಯಾಗುತ್ತಾ ಬಂದಿದ್ದ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಈಗ ಬಿಜೆಪಿಗೆ ಹೀನಾಯ ಸೋಲಾಗಿದೆ. ಪೂಲ್ಪುರದಲ್ಲೂ ಪಕ್ಷ ಪರಾಭವಗೊಂಡಿದೆ. ತನ್ನ ಕ್ಷೇತ್ರದಲ್ಲೇ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲಾಗದ ಯೋಗಿ ಅವರು ಇನ್ನು ಯಾವ ಶಕ್ತಿ ಇಟ್ಟುಕೊಂಡು ಕರ್ನಾಟಕದಲ್ಲಿ ಪ್ರಚಾರ ನಡೆಸಿಯಾರು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅತ್ಯುತ್ತಮ ಕೆಲಸ ಮಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣವಿದೆ .ಇಲ್ಲಿ ಯೋಗಿಯ ಆಟ ನಡೆಯುವುದಿಲ್ಲ ಎಂದರು.
ಕೇವಲ ಉತ್ತರಪ್ರದೇಶ ಮಾತ್ರವಲ್ಲ, ಇತ್ತೀಚಿನ ವರ್ಷದಲ್ಲಿ ದೇಶದೆಲ್ಲೆಡೆ ನಡೆದ 13 ಉಪ ಚುನಾವಣೆಗಳಲ್ಲಿ ಬಿಜೆಪಿ ಸೋಲು ಅನುಭವಿಸಿದೆ. ಉತ್ತರ ಭಾರತದ ಜನ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ಎಲ್ಲಾ ಜಾತ್ಯಾತೀತ ಶಕ್ತಿಗಳು ಒಟ್ಟಾದರೆ ಮತೀಯ ಶಕ್ತಿಗಳನ್ನು ಸೋಲಿಸಬಹುದು ಎಂಬುದನ್ನು ಈಗ ಉತ್ತರ ಪ್ರದೇಶದಲ್ಲಿ ನಡೆದ ಉಪ ಚುನಾವಣೆಯ ಫಲಿತಾಂಶ ತೋರಿಸಿದೆ ಎಂದರು.
Click this button or press Ctrl+G to toggle between Kannada and English