ಮಂಗಳೂರು: ಮಂಗಳೂರಿನ ಬಂದರು ಪ್ರದೇಶದಲ್ಲಿ ಗುಜರಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ, ಅಪಾರ ನಷ್ಟ ಸಂಭವಿಸಿದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಗುಜರಿ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಬೂದಿಯಾಗಿವೆ. ಬಂದರು ಪ್ರದೇಶದ ಬೀಬಿ ಅಲಾಬಿ ರಸ್ತೆಯಲ್ಲಿರುವ ಗುಜರಿ ಅಂಗಡಿಗೆ ಬೆಂಕಿ ಹೊತ್ತಿಕೊಂಡು, ಸುತ್ತಲ ಪರಿಸರದಲ್ಲಿ ಆವರಿಸಿಕೊಂಡಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಬೆಂಕಿ ನಂದಿಸಲು ಶ್ರಮಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆ ಶ್ರಮಿಸಿದ ಬಳಿಕ ಬೆಂಕಿ ನಂದಿಸಲಾಗಿದೆ.
ಈ ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಶಂಕಿಸಲಾಗಿದೆ. ಗುಜರಿ ಅಂಗಡಿಯಲ್ಲಿ ಸಂಗ್ರಹಿಸಿದ್ದ ಸಾಮಾನುಗಳು ಧಗಧಗನೆ ಉರಿದ ಪರಿಣಾಮ ದಟ್ಟ ಹೊಗೆ ಆವರಿಸಿತ್ತು. ಬೆಂಕಿಯ ಕೆನ್ನಾಲಗೆ ಗುಜರಿ ಅಂಗಡಿಯ ಅಕ್ಕಪಕ್ಕದ ಅಂಗಡಿಗಳಿಗೂ ಆವರಿಸಿದ ಪರಿಣಾಮ ಹಾನಿಯ ಪ್ರಮಾಣ ಹೆಚ್ಚಿದೆ. ಈ ಅವಘಡದಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ. ಬೆಂಕಿ ಅವಘಡದಿಂದ ಗುಜರಿ ಅಂಗಡಿ ಸಂಪೂರ್ಣ ಭಸ್ಮವಾಗಿದ್ದು, ಲಕ್ಷಾಂತರ ರುಪಾಯಿ ನಷ್ಟ ಸಂಭವಿಸಿದೆ.
ಘಟನೆ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದಾಗಿ ಹೆಚ್ವಿನ ಅನಾಹುತ ತಪ್ಪಿದೆ.
Click this button or press Ctrl+G to toggle between Kannada and English