ಬೆಂಗಳೂರು: ಒಂದೆಡೆ ಕರಾವಳಿ ಜಿಲ್ಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಸಂಘಟನೆಗೆ ರಾಜ್ಯ ಪ್ರವಾಸ ನಡೆಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾ. 26 ರಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಚುನಾವಣಾ ಆಯೋಗ ಯಾವುದೇ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಪಡಿಸಲು ಸಜ್ಜಾಗಿದೆ. ಇದರ ಸುಳಿವು ಅರಿತಿರುವ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಸರಣಿ ಸಮಾರಂಭಗಳನ್ನು ಹಮ್ಮಿಕೊಂಡಿದೆ.
ಮಾ. 26ರಿಂದ ಮೂರು ದಿನಗಳ ಕಾಲ ಅಮಿತ್ ಶಾ ಅವರು ಈ ಬಾರಿ ಚಿಕ್ಕಮಗಳೂರು, ಶಿವಮೊಗ್ಗ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಈಗಾಗಲೇ ರಾಜ್ಯ ಘಟಕದ ನಾಯಕರು ಅಮಿತ್ ಶಾ ಅವರ ಪ್ರವಾಸದ ವೇಳಾಪಟ್ಟಿಯನ್ನು ದೆಹಲಿಗೆ ಕಳುಹಿಸಿಕೊಟ್ಟಿದ್ದಾರೆ. ವರಿಷ್ಠರ ಒಪ್ಪಿಗೆ ಸಿಕ್ಕರೆ ನಿಗದಿಯಂತೆ ಪ್ರವಾಸ ಆರಂಭವಾಗಲಿದೆ.
ಮಾ. 23 ಇಲ್ಲವೇ 28 ರಂದು ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಲಿದ್ದು, ಅಷ್ಟರೊಳಗೆ ಬಿಜೆಪಿ ನಾಯಕರು ರಾಜ್ಯದ ಸುಮಾರು ಅರ್ಧಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಸ ಮಾಡಬೇಕೆಂಬ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಈಗಾಗಲೇ ಪಕ್ಷದ ಪ್ರಮುಖ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರು ರಾಜಧಾನಿ ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ ಭಾಗಗಳಲ್ಲಿ ಪ್ರಚಾರ ನಡೆಸಿದ್ದಾರೆ.
ಉಳಿದಿರುವ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ರಾಯಚೂರು, ವಿಜಾಪುರ ಮತ್ತಿತರ ಕಡೆ ಪ್ರಚಾರ ನಡೆಸುವ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸುವುದು ಕಮಲ ನಾಯಕರ ಲೆಕ್ಕಾಚಾರ. ಒಂದೆಡೆ ಕಾಂಗ್ರೆಸ್ ತನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಹುಲ್ ಗಾಂಧಿ ಮೂಲಕ ಸಭೆ-ಸಮಾರಂಭ, ರೋಡ್ ಶೋ ನಡೆಸಿ ಪಕ್ಷ ಸಂಘಟಿಸಲು ಒತ್ತು ನೀಡುತ್ತಿದೆ. ನಾವು ಕೂಡ ಹಿಂದೆ ಬೀಳಬಾರದೆಂಬ ಕಾರಣಕ್ಕಾಗಿಯೇ ಬಿಜೆಪಿ ರಾಷ್ಟ್ರೀಯ ನಾಯಕರ ಮೂಲಕವೇ ಚುನಾವಣೆಗೆ ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ.
Click this button or press Ctrl+G to toggle between Kannada and English