ಬೆಂಗಳೂರು : ಚಿಕ್ಕಮಗಳೂರು ಶಾಸಕರಾಗಿ ಮೂರು ಬಾರಿ ಆಯ್ಕೆಯಾಗಿದ್ದ ಶಾಸಕ ಸಿ.ಟಿ.ರವಿ ಅಸಮಾಧಾನದಿಂದ ಶಾಸಕ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಗೊಂಡಿದೆ.
ಚಿಕ್ಕಮಗಳೂರಿನಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದರೂ ಕೂಡ ಯಾವುದೇ ಬೆಲೆ ಸಿಕ್ಕಿಲ್ಲ ಎಂಬ ಅಸಮಾಧಾನದಿಂದ ಸಿ.ಟಿ.ರವಿ ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಿಗೆ ಇಂದು ಬೆಳಿಗ್ಗೆ ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಪುನಾರಚನೆ ಕುರಿತಾಗಿ ಹೈಕಮಾಂಡ್ ಜೊತೆ ಮಾತುಕತೆ ಮುಕ್ತಾಯ ಗೊಳಿಸಿದ್ದು ಸಚಿವ ಸಂಪುಟ ಪುನಾರಚನೆಗೆ ಪಕ್ಷದ ಹೈಕಮಾಂಡ್ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಶಾಸಕ ಬೇಳೂರು ಗೋಪಾಲಕೃಷ್ಣ, ಶಂಕರಲಿಂಗೇಗೌಡ, ಎಸ್.ಕೆ.ಬೆಳ್ಳುಬ್ಬಿ, ಜೀವರಾಜ್ ಸೇರಿದಂತೆ ಹಲವರು ಪಕ್ಷದ ವರಿಷ್ಠರಿಗೆ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ.
ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ್ ರಾಜೀನಾಮೆ ಕೇಳಿದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಎಚ್ಚರಿಕೆಯನ್ನೂ ನೀಡಿದ್ದಾರೆ. ಗ್ರಂಥಾಲಯ ಸಚಿವ ಶಿವನಗೌಡ ನಾಯಕ್ ಅವರನ್ನೂ ಸಚಿವ ಸಂಪುಟದಿಂದ ಕೈಬಿಡುತ್ತಾರೆಂಬ ಗಾಳಿಸುದ್ದಿಯ ಹಿನ್ನೆಲೆಯಲ್ಲಿ ಅವರು ಕೂಡ ರಾಜೀನಾಮೆ ನೀಡುವ ಬೆದರಿಕೆ ಒಡ್ಡುವ ಮೂಲಕ ಬಿಜೆಪಿಯಲ್ಲಿ ಬಿನ್ನಮತೀಯರ ಸಮಸ್ಯೆ ಭುಗಿಲೆದ್ದಿದೆ.
ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.
Click this button or press Ctrl+G to toggle between Kannada and English