3ಡಿ ತಾರಾಲಯ; ಪ್ರದರ್ಶನವೆಲ್ಲ ಹೌಸ್‌ಫುಲ್‌!

6:00 PM, Monday, March 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

taralayaಪಿಲಿಕುಳ: ಇಲ್ಲಿನ ಡಾ. ಶಿವರಾಮ ಕಾರಂತ ಬಯೋಲಾಜಿಕಲ್‌ ಪಾರ್ಕ್‌ನಲ್ಲಿ ಮಾ. 1ರಿಂದ ಆರಂಭವಾಗಿರುವ ವಿಶ್ವದ 21ನೇ ಅತ್ಯಾಧುನಿಕ ಹೈಬ್ರಿಡ್‌ ತ್ರಿಡಿ ‘ಸ್ವಾಮಿ ವಿವೇಕಾನಂದ ತಾರಾಲಯ’ದ ಪ್ರದರ್ಶನಕ್ಕೆ 25 ದಿನದ ಅಂತರದಲ್ಲಿ ಸುಮಾರು 11,000 ಜನರು ಆಗಮಿಸಿ ನಭೋಮಂಡಲದ ವಿಸ್ಮಯ ವೀಕ್ಷಿಸಿದ್ದಾರೆ.

ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ದೂರದೂರಿನಿಂದ ಪಿಲಿಕುಳಕ್ಕೆ ಆಗಮಿಸಿ ತಾರಾಲಯದಲ್ಲಿ ನಭದ ವಿಸ್ಮಯ ನೋಡಲು ಹಾತೊರೆಯುವ ಹಿನ್ನೆಲೆಯಲ್ಲಿ ಟಿಕೆಟ್‌ ಬೇಗನೆ ಖಾಲಿಯಾಗುತ್ತಿದೆ. ಈಗ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ದೊರೆಯಲಿದೆ. ಆಗ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇದೆ.

www.bookmyshow.com ನಲ್ಲಿ ಕೂಡ ಮುಂಗಡ ಟಿಕೆಟ್‌ ಕಾಯ್ದಿರಿಸಲು ಅವಕಾಶವಿದೆ. ತಾರಾಲಯ ಕಾರ್ಯಾರಂಭಿಸಿದ ಅನಂತರದ ಕೆಲವು ದಿನ ಬುಕ್‌ ಮೈ ಶೋದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿ ಟಿಕೆಟ್‌ ಬುಕ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಸಮಸ್ಯೆ ಸರಿಯಾಗಿದೆ.

ಟಿಕೆಟಿನ ದರ ವಯಸ್ಕರಿಗೆ 60 ರೂ. (13 ವರ್ಷಕ್ಕಿಂತ ಕೆಳಗಿನವರಿಗೆ 40 ರೂ.) ನಿಗದಿಪಡಿಸಲಾಗಿದೆ. ನಿಸರ್ಗ ಧಾಮವು ಎಲ್ಲ ವಿಭಾಗಗಳ ವೀಕ್ಷಣೆಗಳಿಗೆ ಪ್ರತೀ ಒಬ್ಬರಿಗೆ ‘ಕಾಂಬೊ ರಿಯಾಯಿತಿ’ ದರ 100 ರೂ. ಇದರಲ್ಲಿ ಪಿಲಿಕುಳ ಮೃಗಾಲಯ ಸಹಿತ ಇಲ್ಲಿರುವ ಎಲ್ಲ ವಿಶೇಷತೆಗಳನ್ನು ಸವಿಯಬಹುದು. ಈ ಮಧ್ಯೆ, ಪ್ರದರ್ಶನ ವೀಕ್ಷಣೆಗೆ ನಿಸರ್ಗ ಧಾಮದ ಮುಖ್ಯ ಪ್ರವೇಶ ದ್ವಾರದಲ್ಲಿ ತೆರೆದಿರುವ ‘ಬಾಕ್ಸ್‌ ಆಫೀಸ್‌’ನಲ್ಲಿ ಟಿಕೆಟ್‌ಗಳನ್ನು ನೀಡಲಾಗುತ್ತದೆ.

ತಾಂತ್ರಿಕವಾಗಿ ಅತ್ಯದ್ಬುತ ಕೇಂದ್ರವಾಗಿ ಪಿಲಿಕುಳ ತಾರಾಲಯವು ಮೂಡಿ ಬಂದಿದೆ. ದೇಶದ ಬೇರೆ ಬೇರೆ ಕಡೆಗಳಲ್ಲಿ ಇರುವ ತಾರಾಲಯಗಳು ಆಪ್ಟೋ- ಮೆಕ್ಯಾನಿಕಲ್‌ ಹಾಗೂ 4ಕೆ ಡಿಜಿಟಲ್‌ ಮಾದರಿಯ ಹೈಬ್ರಿಡ್‌ ತಂತ್ರ ಜ್ಞಾನವನ್ನು ಹೊಂದಿದೆ. ಪಿಲಿಕುಳದ ತಾರಾಲಯವು ಅಪ್ಟೋ-ಮೆಕ್ಯಾನಿಕಲ್‌ ಮತ್ತು 8ಕೆ ಡಿಜಿಟಲ್‌ ಪ್ರೊಚೆಕ್ಷನ್‌ ಸಿಸ್ಟಂ ಗಳನ್ನು ಅಳವಡಿಸಿ ಹೈಬ್ರಿಡ್‌ ವ್ಯವಸ್ಥೆಯನ್ನು ಹೊಂದಿದೆ. ಹೀಗಾಗಿ, ಆ್ಯಕ್ಟಿವ್‌ ತ್ರಿಡಿ ವ್ಯವಸ್ಥೆಯ ಮೂಲಕ ವೀಕ್ಷಕರಿಗೆ ಹೊಸ ಅನುಭವ ನೀಡುತ್ತಿದೆ.

‘ಪಿಲಿಕುಳದ ತಾರಾಲಯದ ಎಲ್ಲ ಉಪಕರಣಗಳು, ಯಂತ್ರಗಳನ್ನು ಅಮೆರಿಕಾ, ಜಪಾನ್‌ನ ತಜ್ಞರು ಬಂದು ಜೋಡಿಸಿದ್ದಾರೆ. 18 ಮೀಟರ್‌ ವ್ಯಾಸದ ಡೋಮ್‌ ನೊಳಗೆ (ಗುಮ್ಮಟ) ಅತ್ಯಂತ ಪರಿಣಾಮಕಾರಿಯಾದ ನ್ಯಾನೋಸಿಮ್‌ ಫ್ಯಾಬ್ರಿಕೇಶನ್‌ ಅಳವಡಿಸಲಾಗಿದೆ. ಇಲ್ಲಿನ 8ಕೆ ಯುಎಚ್‌ಡಿಯಿಂದ ವೀಕ್ಷಕರಿಗೆ ನಭೋಮಂಡಲದ ನೈಜ ಅನುಭವ ಸಿಗಲಿದೆ. ಗ್ಯಾಲಕ್ಸಿ, ನಕ್ಷತ್ರಗಳು, ಗ್ರಹಗಳ ಸಹಿತ ಎಲ್ಲ ಆಕಾಶಕಾಯಗಳ ಚಿತ್ರಣಗಳನ್ನು ಅತ್ಯಂತ ಸ್ಪಷ್ಟವಾಗಿ ನೋಡಬಹುದಾಗಿದೆ. 4ಕೆ ಅಲ್ಟ್ರಾ ಎಚ್‌ಡಿ ಪರದೆ ಗಳು ಚಿತ್ರಗಳನ್ನು 1080ಪಿ ಫುಲ್‌ ಎಚ್‌ಡಿಗಿಂತ ನಾಲ್ಕು ಪಟ್ಟು ಉತ್ತಮವಾಗಿ ಮೂಡಿಸುತ್ತಿವೆ’ ಎನ್ನುತ್ತಾರೆ ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್‌.

ಪಿಲಿಕುಳ ತಾರಾಲಯದಲ್ಲಿ ‘ವಿ ಆರ್‌ ದಿ ಸ್ಟಾರ್’ ಪ್ರದರ್ಶನವು ಕನ್ನಡ, ಆಂಗ್ಲ ಭಾಷೆಗಳಲ್ಲಿ ಬಿತ್ತರಗೊಳ್ಳುತ್ತಿದೆ. 173 ಜನರು ಒಮ್ಮೆಗೆ ಇಲ್ಲಿ ಕುಳಿತುಕೊಳ್ಳಲು ಅವಕಾಶವಿದೆ. ಪ್ರತಿ ಮಂಗಳವಾರದಿಂದ (ಸೋಮವಾರ ರಜೆ) ಶುಕ್ರವಾರ ತನಕ ಬೆಳಗ್ಗೆ 11ರಿಂದ ಸಂಜೆ 4.30ರ ವರೆಗೆ ದಿನದಲ್ಲಿ ಒಟ್ಟು 4 (11ಕ್ಕೆ ಕನ್ನಡ, 12.30ಕ್ಕೆ ಇಂಗ್ಲಿಷ್‌, 3 ಗಂಟೆಗೆ ಕನ್ನಡ ಹಾಗೂ 4.30ಕ್ಕೆ ಇಂಗ್ಲಿಷ್‌) ಪ್ರದರ್ಶನಗಳಿವೆ. ವಾರದ ಪ್ರತಿ ಶನಿವಾರ ಹಾಗೂ ರವಿವಾರ ಬೆಳಗ್ಗೆ 11ರಿಂದ ಸಂಜೆ 6.30ರ ವರೆಗೆ ಒಟ್ಟು 6 ಪ್ರದರ್ಶನಗಳಿವೆ.

ಅದರಂತೆ ಬೆಳಗ್ಗೆ 11ಕ್ಕೆ ಕನ್ನಡ, 12ಕ್ಕೆ ಇಂಗ್ಲಿಷ್‌, ಅಪರಾಹ್ನ 2.30ಕ್ಕೆ ಕನ್ನಡ, ಸಂಜೆ 4ಕ್ಕೆ ಇಂಗ್ಲಿಷ್‌, 5.30 ಕನ್ನಡ ಹಾಗೂ 6.30ಕ್ಕೆ ಇಂಗ್ಲಿಷ್‌ ಪ್ರದರ್ಶನವಿದೆ. ಪ್ರತಿ ಪ್ರದರ್ಶನವು ಒಟ್ಟು 45 ನಿಮಿಷಗಳಿರುತ್ತವೆ ಎಂದು ತಾರಾಲಯದ ಕ್ಯುರೇಟರ್‌ ಜಗನ್ನಾಥ್‌ ಅವರು ಉದಯವಾಣಿ ‘ಸುದಿನ’ಕ್ಕೆ ತಿಳಿಸಿದ್ದಾರೆ.

ದೇಶದ ಇತರ ಕಡೆಗಳ ತಾರಾಲಯದಲ್ಲಿ ವೀಕ್ಷಿಸಲು 3ಡಿ ಎಫೆಕ್ಟ್ ಫೋಲರೈಸ್‌ಡ್‌ ಕನ್ನಡಕವನ್ನು ಬಳಸಲಾಗುತ್ತದೆ. ಆದರೆ, ಪಿಲಿಕುಳದಲ್ಲಿ ಆ್ಯಕ್ಟಿವ್‌ 3ಡಿ ಗ್ಲಾಸ್‌ಗಳನ್ನೇ ಬಳಸಲಾಗುತ್ತಿದೆ. ಇದರಲ್ಲಿ ಎಲೆಕ್ಟ್ರಾನಿಕ್‌ ಸರ್ಕಿಟ್‌ ಇರುವುದರಿಂದ ಈ ಗ್ಲಾಸ್‌ಗಳು ಉತ್ತಮ ಅನುಭವಗಳನ್ನು ಕಲ್ಪಿಸುತ್ತದೆ. ಸಾಮಾನ್ಯವಾಗಿ 3ಡಿ ಕನ್ನಡಕಗಳಿಗೆ ಸುಮಾರು 200 ರೂ.ಗಳಷ್ಟಿದ್ದರೆ, ಪಿಲಿಕುಳದಲ್ಲಿ ಬಳಸುತ್ತಿರುವ 3ಡಿ ಗ್ಲಾಸ್‌ಗೆ ಸುಮಾರು 3,000 ರೂ. ಇದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English