ಮಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜ್ಯದಾದ್ಯಂತ ಕಟ್ಟು ನಿಟ್ಟಾಗಿ ನೀತಿ ಸಂಹಿತೆ ಜಾರಿಗೊಳಿಸಿ ಚುನಾವಣಾ ಅಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟು ನಿಟ್ಟಾಗಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ತರಲಾಗಿದೆ. ರಾಜಕಾರಣಿಗಳಿಗೆ ನೀಡಲಾಗಿದ್ದ ಕಾರು ಭಾಗ್ಯ ಸೇರಿದಂತೆ ಕಚೇರಿಗಳನ್ನು ವಾಪಾಸ್ ಪಡೆಯಲಾಗಿದೆ. ನಗರದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ , ಬ್ಯಾನರ್ ಗಳನ್ನು ತೆರವುಗೊಳಿಸಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿಯಾಗಿದೆ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಕಣ್ಗಾವಲಲ್ಲಿ ಮಂಗಳೂರು ಸೇರಿದಂತೆ ಜಿಲ್ಲೆಯ ಎಲ್ಲಾ ಆಯಕಟ್ಟಿನ ಜಾಗದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ , ಬ್ಯಾನರ್ ಗಳನ್ನು ತೆರವುಗೊಳಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಿರುವ ಬಂಟಿಂಗ್ , ಹೊಲ್ಡಿಂಗ್ಸ್ , ಫ್ಲೆಕ್ಸ್ , ಬ್ಯಾನರ್ ಗಳನ್ನು ತೆರವು ಮಾಡಲು ಅಧಿಕಾರಿಗಳ 3 ತಂಡಗಳನ್ನು ರಚಿಸಲಾಗಿದೆ.
ಸರಕಾರದ ಸಾಧನೆ , ಯೋಜನೆಗಳ ಮಾಹಿತಿ, ಜನಪ್ರತಿನಿಧಿಗಳ ಭಾವಚಿತ್ರ ಇರುವ ಎಲ್ಲಾ ಫ್ಲೆಕ್ಸ್ , ಬಂಟಿಂಗ್, ಬ್ಯಾನರ್ ತೆರವು ಮಾಡಲಾಗಿದೆ.ಆದರೆ ನಗರದ ಹಲವಾರು ಭಾಗಗಳಲ್ಲಿ ಸರಕಾರದ ಜಾಹೀರಾತು ಫ್ಲೆಕ್ ಗಳನ್ನು ತೆರವುಗೊಳಿಸಲಾಗಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳೂರು ಪ್ರವಾಸದ ಸಂದರ್ಭದಲ್ಲಿ ಅಳವಡಿಸಲಾಗಿದ್ದ ಸ್ವಾಗತ ಕೋರುವ ಬ್ಯಾನರ್ ಗಳನ್ನು ತೆರವುಗೊಳಿಸಲು ಅಧಿಕಾರಿಗಳು ಮನಸ್ಸು ಮಾಡಿಲ್ಲ.
ಈ ನಡುವೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರ ಸಾಧನೆ, ಸರಕಾರದ ಸವಲತ್ತುಗಳೊಂದಿಗೆ ಶಾಸಕರ ಭಾವಚಿತ್ರ ಅಂಟಿಸಿರುವ ಆಟೋ ರಿಕ್ಷಾ ಒಂದು ನಗರದಲ್ಲಿ ನಿರ್ಭೀತಿಯಿಂದಲೇ ಸಂಚರಿಸುತ್ತಿದೆ. ಸಂಪೂರ್ಣ ಲೋಬೋಮಯಗೊಂಡಿರುವ ಈ ಆಟೋ ರಿಕ್ಷಾಗೆ ನೀತಿ ಸಂಹಿತೆ ಲಾಗೂ ಆಗೋದಿಲ್ಲವೇ? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.ಅದಲ್ಲದೇ ನಗರದ ಸಿಟಿಬಸ್ ನಿಲ್ದಾಣ , ರಿಕ್ಷಾ ಪಾರ್ಕ್ ಗಳಿಗೆ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ ಅವರ ಹೆಸರು ಅಳವಡಿಸಲಾಗಿದೆ.
ಇದಲ್ಲದೆ ಐವನ್ ಡಿಸೋಜಾ ಅವರ ಹೆಸರಿನಲ್ಲಿ ಅಳವಡಿಸಲಾಗಿರುವ ಬೋರ್ಡ್ ಗಳನ್ನು ತೆರವುಗಳಿಸುವುದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನೊಂದಡೆ ಪೊಲೀಸ್ ಇಲಾಖೆಗೆ ಧರ್ಮ ಸಂಕಟದ ಪರಿಸ್ಥತಿ ಸೃಷ್ಟಿಯಾಗಿದೆ. ಮಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಅಳವಡಿಸುವ ಬಹುತೇಕ ಎಲ್ಲಾ ಬ್ಯಾರಿಕೇಡ್ ಗಳು ಐವನ್ ಡಿಸೋಜಾ ಹೆಸರಿನಲ್ಲಿ ನೀಡಲಾಗಿದೆ. ಈ ಬ್ಯಾರಿಕೇಡ್ ಗಳ ಮೇಲೆ ಐವನ್ ಡಿಸೋಜಾ ಅವರ ಹೆಸರನ್ನು ನಮೋದಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಹುತೇಕ ಬ್ಯಾರಿಕೇಡ್ ಗಳಿಗೆ ಬಣ್ಣ ಬಳಿಯ ಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ.
Click this button or press Ctrl+G to toggle between Kannada and English