ಮಂಗಳೂರು: ಕೇಂದ್ರ ಸರಕಾರವು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದೆ ಎಂಬ ಕಾರಣಕ್ಕಾಗಿಯೇ ಬರದಂತಹ ಪರಿಸ್ಥಿತಿಯಲ್ಲೂ ಮಲತಾಯಿ ಧೋರಣೆ ಅನುರಿಸಿದೆ ಎಂದು ಎಐಸಿಸಿ ವಕ್ತಾರೆ ಹಾಗೂ ಪಕ್ಷದ ಸಂವಹನ ವಿಭಾಗದ ಸಂಚಾಲಕಿ ಪ್ರಿಯಾಂಕ ಚತುರ್ವೇದಿ ಆರೋಪಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯವು 2017ರಲ್ಲಿ ಹಿಂದೆಂದೂ ಕಂಡಿರದ ಬರವನ್ನು ಎದುರಿಸಬೇಕಾಯಿತು. ಈ ಸಂದರ್ಭ ಕೇಂದ್ರ ಸರಕಾರ ಒಂದಿಷ್ಟಾದರೂ ಕಾಳಜಿಯನ್ನು, ಕನಿಕರವನ್ನು ರಾಜ್ಯದ ಬಗ್ಗೆ ತೋರಿಸಿ ಬರ ಪರಿಹಾರ ವಿತರಣೆಯಲ್ಲಾದರೂ ಸಮಾನತೆಯನ್ನು ತೋರ್ಪಡಿಸಬಹುದಿತ್ತು ಎಂದರು.
ಬಿಜೆಪಿ ತನ್ನ `ವೋಟ್ ಬ್ಯಾಂಕ್’ ರಾಜಕಾರಣಕ್ಕಾಗಿ ದೇಶದ ಶಾಂತಿಯನ್ನು ಬಲಿ ಕೊಡುತ್ತಿದೆ. ಅಭಿವೃದ್ಧಿಗೆ ಒತ್ತು ನೀಡದೆ, ದೇಶವನ್ನು ವಿಭಜಿಸಿ ಆಳುವತ್ತ ಬಿಜೆಪಿ ಸರಕಾರ ಹೆಚ್ಚಿನ ಆಸಕ್ತಿ ವಹಿಸಿದೆ. ಇದಕ್ಕಾಗಿ ದೇಶದ ಜನರ ಮನಸ್ಸಿನಲ್ಲಿ ದ್ವೇಷವನ್ನು ತುಂಬುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎನ್ನುವ ಕೇಂದ್ರ ಸರಕಾರ ದೇಶದ ತೆರಿಗೆ ಪಾವತಿಯಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡುತ್ತಿರುವ ಕರ್ನಾಟಕದ ಬಗ್ಗೆ ಈ ರೀತಿ ನಿರ್ಲಕ್ಷ್ಯ ಯಾಕೆ ಎಂಬ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರಿಸಬೇಕು ಎಂದವರು ಆಗ್ರಹಿಸಿದರು.
Click this button or press Ctrl+G to toggle between Kannada and English