ಮಕ್ಕಳ ಶಿಕ್ಷಣಕ್ಕಾಗಿ ಬದುಕನ್ನೇ ಮುಡಿಪಿಟ್ಟ ಆದರ್ಶ ಗುರು… ಹೆಮ್ಮೆ ಪಡುತ್ತಿದೆ ಶಿಷ್ಯ ಸಮೂಹ

12:13 PM, Monday, April 2nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

educationಮಂಗಳೂರು: ಮಾತೃದೇವೋ ಭವ, ಪಿತೃದೇವೋ ಭವ ಮತ್ತು ಗುರುದೇವೋ ಭವ. ಅಂದರೆ ಹುಟ್ಟಿದ ಕೂಡಲೇ ನಮಗೆ ಎಲ್ಲವನ್ನೂ ಕಲಿಸುವ ತಾಯಿ, ಹುಟ್ಟಿದಂದಿನಿಂದಲೇ ಪಾಲನೆಯ ಜವಾಬ್ದಾರಿ ಹೊರುವ ತಂದೆ ಜೊತೆಗೆ ಸೂಕ್ತ ವಿದ್ಯಾಭ್ಯಾಸ ನೀಡಿ ಮಕ್ಕಳನ್ನು ತಿದ್ದಿ ತೀಡುವ ಗುರು ಈ ಮೂವರೂ ಕೂಡ ದೇವರ ಸಮಾನರು ಎನ್ನುವ ನಂಬಿಕೆ ನಮ್ಮಲ್ಲಿದೆ.

ಅದರಲ್ಲೂ ಈ ಪೈಕಿ ಮಕ್ಕಳಿಗೆ ಶಿಕ್ಷಣ ನೀಡಿ, ಅವರನ್ನು ತಿದ್ದಿ, ತೀಡಿ ಅವರನ್ನು ಪ್ರಜ್ಞಾವಂತ ನಾಗರಿಕರು, ಸುಶಿಕ್ಷಿತರನ್ನಾಗಿ ಮಾಡುವ ಜವಾಬ್ದಾರಿ ಇರುವ ಗುರುವಿನ ಸ್ಥಾನ ಮಹತ್ವದ್ದು. ಮಕ್ಕಳ ಏಳಿಗೆಗಾಗಿ ತಮ್ಮ ಸರ್ವಸ್ವವನ್ನೂ ಮುಡಿಪಾಗಿಟ್ಟ ಅದೆಷ್ಟೋ ಗುರುಗಳ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಇಂತಹ ಮಹಾನ್ ಗುರುಗಳ ಪಾಲಿಗೆ ಸೇರುತ್ತಾರೆ ಕೊಂಚಾಡಿ ಶ್ರೀ ರಾಮಾಶ್ರಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ ರಾವ್.

ಈಗಾಗಲೇ ಶತಮಾನೋತ್ಸವವನ್ನು ಕಂಡಿರುವ ಕೊಂಚಾಡಿಯ ಶ್ರೀ ರಾಮಾಶ್ರಮ ಅನುದಾನಿತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಶಾಲೆಯ ಏಳಿಗೆಗಾಗಿ, ಮಕ್ಕಳ ಹಿತಕ್ಕಾಗಿ ಮಾಡಿರುವಂತಹ ಕೆಲಸ ನಿಜಕ್ಕೂ ಶ್ಲಾಘನೀಯ. ತಮಗೆ ಬರುವ ಸಂಬಳದ ಬಹುಪಾಲನ್ನು ಶಾಲೆಯ ಗೌರವ ಶಿಕ್ಷಕರ ವೇತನಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಈ ಮೂಲಕ ಶಾಲೆಯಲ್ಲಿ ಕಂಡುಬರುತ್ತಿದ್ದ ಶಿಕ್ಷಕರ ಸಮಸ್ಯೆಯನ್ನು ಇವರು ನೀಗಿಸಿದ್ದಾರೆ. ಇದೀಗ ನಿವೃತ್ತಿಯ ಹಂತದಲ್ಲಿರುವ ಸುರೇಶ್ ರಾವ್ ಅವರ ಬಗ್ಗೆ ಅವರ ಇಡೀ ಶಿಷ್ಯಸಮೂಹವೇ ಹೆಮ್ಮೆಪಡುತ್ತಿದೆ.

ಸುರೇಶ್ ಅವರು ಕೊಂಚಾಡಿ ರಾಮಾಶ್ರಮ ಶಾಲೆಯಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದಾರೆ. 1978ರಲ್ಲಿ ಸುರೇಶ್ ಅವರು ಅಧ್ಯಾಪಕರಾಗಿ ಸೇರಿ, ಕೆಲವು ವರ್ಷಗಳ ಹಿಂದೆ ಮುಖ್ಯೋಪಾಧ್ಯಾರಾಗಿ ಭಡ್ತಿ ಪಡೆದಿದ್ದರು. ಅಧ್ಯಾಪಕರಾಗಿದ್ದ ಸಂದರ್ಭದಲ್ಲೇ ಮಕ್ಕಳ ಬಗೆಗೆ ಅಪಾರ ಕಾಳಜಿ ತೋರಿಸುತ್ತಿದ್ದ ಸುರೇಶ್ ಅವರು, ಬಡ ಮಕ್ಕಳ ಶಾಲಾ ಫೀಸ್, ಬಸ್ ಚಾರ್ಜ್ ಇತ್ಯಾದಿಗಳನ್ನು ಭರಿಸುತ್ತಿದ್ದರು.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಆಕರ್ಷಣೆಯನ್ನು ಕಳೆದುಕೊಳ್ಳತೊಡಗಿದ್ದವು. ಅನುದಾನಿತ ಶಾಲೆಯಾದ ಕಾರಣ ಸರ್ಕಾರವು ನೇಮಿಸಿದ ಶಿಕ್ಷಕರಿಂದ ಶಾಲೆಯನ್ನು ಮುನ್ನಡೆಸುವುದು ಕಷ್ಟಸಾಧ್ಯವಾಗಿತ್ತು. ಈ ಸಂದರ್ಭದಲ್ಲಿ ಸುರೇಶ್ ಅವರೇ ತಮ್ಮ ಸಂಬಳದ ಅರ್ಧಕ್ಕೂ ಅಧಿಕ ಅಂಶವನ್ನು ತೆಗೆದಿರಿಸಿ, ಗೌರವ ಶಿಕ್ಷಕರನ್ನು ನೇಮಿಸಿ ಅವರಿಗೆ ವೇತನ ನೀಡುತ್ತಾ ಬರುತ್ತಿದ್ದಾರೆ. ಶಾಲೆಯ ಬಗೆಗಿನ ಅವರ ಕಾಳಜಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದೆ.

ಸುರೇಶ್ ರಾವ್ ಅವರ ಸಾರಥ್ಯದಿಂದ ಶಾಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸುರೇಶ್ ಅವರ ಪ್ರಯತ್ನಕ್ಕೆ ಆಡಳಿತ ಮಂಡಳಿಯಿಂದ ಕೂಡ ನಿರಂತರ ಪ್ರೋತ್ಸಾಹ ದೊರೆಯುತ್ತಿದೆ. ಸುರೇಶ್ ಅವರ ಮೂಲಕ ವಿದ್ಯಾಭ್ಯಾಸ ಪಡೆದ ಅದೆಷ್ಟೋ ಮಂದಿ ಇಂದು ಸಮಾಜದಲ್ಲಿ ಗಣ್ಯರ ಸ್ಥಾನವನ್ನು ಅಲಂಕರಿಸಿದ್ದಾರೆ. ಇದೀಗ ತಮ್ಮ ಸೇವಾವಧಿಯನ್ನು ಪೂರೈಸಿ ನಿವೃತ್ತಿ ಹೊಂದುತ್ತಿದ್ದಾರೆ. ಅವರ ನಿವೃತ್ತ ಜೀವನವು ನೆಮ್ಮದಿಯಾಗಿರಲಿ. ಅವರ ಕಾರ್ಯ ಎಲ್ಲರಿಗೂ ಆದರ್ಶಪ್ರಾಯವಾಗಲಿ ಎನ್ನುವುದು ಅವರ ಸಮಸ್ತ ಶಿಷ್ಯವೃಂದದ ಆಶಯವಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English