ಮಂಗಳೂರು: ಅಡಿಕೆ ಆರೋಗ್ಯದಾಯಕವಾಗಿರುವ ಆಯುರ್ವೇದ ಔಷಧೀಯ ಗುಣವುಳ್ಳ ಉತ್ಪನ್ನ. ಅದರಲ್ಲಿ ಕ್ಯಾನ್ಸರ್‌ಕಾರಕ ಅಂಶವಿಲ್ಲ ಎಂಬುದು ಸಾಬೀತುಗೊಂಡಿದೆ. ಈ ಕುರಿತಂತೆ ಅಂತಾರಾಷ್ಟ್ರೀಯ ಮಟ್ಟದ ಸಂಶೋಧಕರು ತಯಾರಿಸಿರುವ ವರದಿಯನ್ನು ಏ. 4ರಂದು ಕೇಂದ್ರ ಆರೋಗ್ಯ ಸಚಿವರಿಗೆ ಸಲ್ಲಿಸಲಾಗುವುದು ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಹೇಳಿದ್ದಾರೆ.
ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಡಿಕೆ ಕುರಿತು ಗೊತ್ತಿಲ್ಲದವರು ಕ್ಯಾನ್ಸರ್‌ಕಾರಕ ಎಂದು ಬಿಂಬಿಸುತ್ತಿದ್ದಾರೆ. ಅಡಿಕೆ ಕ್ಯಾನ್ಸರ್‌ಕಾರಕವಲ್ಲ. ಬೆಳೆಗಾರರು ಗೊಂದಲಕ್ಕೊಳಗಾಗುವುದು ಬೇಡ ಎಂದರು.
ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ಬಗ್ಗೆ ಹಲವು ವರ್ಷಗಳಿಂದ ಚರ್ಚೆಯಾಗುತ್ತಿತ್ತು. ಆದರೆ ಅಂತಾರಾಷ್ಟ್ರೀಯ ಸಂಶೋಧನೆಯ ಪ್ರಕಾರ ಅಡಿಕೆಯು ಔಷಧೀಯ ಗುಣವಿರುವ ವಸ್ತು ಎಂಬುದು ದೃಢಪಟ್ಟಿದೆ. ಈ ಬಗ್ಗೆ ಅಧಿಕೃತವಾಗಿ ಚರ್ಚೆ ಬೇರೆ ಹಂತಗಳಲ್ಲಿ ನಡೆದಿರಲಿಲ್ಲ. 15 ದಿನಗಳ ಹಿಂದೆ ಸಂಸದರು, ಅಡಿಕೆ ಮಾರಾಟಗಾರರ ಸಂಘಗಳ ಒಕ್ಕೂಟ, ಕ್ಯಾಂಪ್ಕೋ, ಮ್ಯಾಂಪ್ಕೋ ಸೇರಿದಂತೆ ಆರೋಗ್ಯ ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವರಿಕೆ ಮಾಡಲಾಗಿದೆ.
ಅಡಿಕೆ ಮೂಲತಃ ಔಷಧೀಯ ಗುಣವಿರುವ ವಸ್ತು ಎಂಬುದನ್ನು ಚರ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ನಡೆದ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಯ ವರದಿ ಕೈ ಸೇರಿದ್ದು, ಅದನ್ನು ಆರೋಗ್ಯ ಮತ್ತು ಕೃಷಿ ಮತ್ತು ಇತರ ಸಂಶೋಧನಾ ಸಂಸ್ಥೆಗಳಿಗೆ ಭೇಟಿಯಾಗಿ ನೀಡಲಿದ್ದೇವೆ.
ಈ ನಡುವೆ, ಅಡಿಕೆ ಬೆಳೆಗಾರರು ಹಾಗೂ ಮಾರಾಟಗಾರರ ಮಧ್ಯೆ ಗೊಂದಲ ಸೃಷ್ಟಿ ಮಾಡುವ ಕೆಲಸ, ಉತ್ತರ ಭಾರತದಲ್ಲಿ ಅಡಿಕೆ ಬಗ್ಗೆ ತಿಳಿಯದೆ ಇಲ್ಲಿ ಬಂದು ಹೇಳಿಕೆ ನೀಡುವ ಮೂಲಕ ನಡೆಯುತ್ತಿದೆ. ಈ ಬಗ್ಗೆ ಅಡಿಕೆ ಬೆಳೆಗಾರರು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ಶೀಘ್ರದಲ್ಲೇ ಸಂಶೋಧನೆಯ ವರದಿಯಿಂದ ಗೊಂದಲ ಪರಿಹಾರವಾಗಲಿದೆ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English