ಇವಿಎಂ ಬಗ್ಗೆ ಯಾವುದೇ ಗೊಂದಲ, ಸಂಶಯ ಬೇಡ: ಜಿಲ್ಲಾಧಿಕಾರಿ

10:15 AM, Wednesday, April 4th, 2018
Share
1 Star2 Stars3 Stars4 Stars5 Stars
(No Ratings Yet)
Loading...

evm-raviಮಂಗಳೂರು: ಇವಿಎಂ ಮತದಾನದ ಕುರಿತು ಯಾವುದೇ ಗೊಂದಲ, ಸಂಶಯ ಬೇಡ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರದ ಕಾರ್ಯನಿರ್ವಹಣೆಯ ಕುರಿತು ತಮ್ಮ ಕಚೇರಿಯಲ್ಲಿ ಮಂಗಳವಾರ ನಡೆದ ಪ್ರಾತ್ಯಕ್ಷಿಕೆ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮತ ಚಲಾಯಿಸಿದ ತಕ್ಷಣ ಇವಿಎಂ ಪಕ್ಕದಲ್ಲೇ ಇರುವ `ವಿವಿಪ್ಯಾಟ್’ ಯಂತ್ರ ಗಮನಿಸಿ. ಅಲ್ಲಿ ಸುಮಾರು 7 ಸೆಕೆಂಡುಗಳ ಕಾಲ ನೀವು ಚಲಾಯಿಸಿದ ಮತದ ಚೀಟಿ ಪ್ರದರ್ಶನಗೊಳ್ಳಲಿದೆ. ನೀವು ಚಲಾಯಿಸಿದ ಮತ ಅದಲು ಬದಲಾಗಿಲ್ಲ ಎಂಬುದನ್ನು ಈ `ವಿವಿಪ್ಯಾಟ್’ನಿಂದ ಖಾತ್ರಿ ಪಡಿಸಿಕೊಳ್ಳಬಹುದು. ನೀವು ಚಲಾಯಿಸಿದ ಮತದ ಮುದ್ರಿತ ಪ್ರತಿಯು ಕೂಡ ಈ `ವಿವಿಪ್ಯಾಟ್’ನಲ್ಲೇ ಶೇಖರಣೆಗೊಳ್ಳಲಿದೆ. ಆದ್ದರಿಂದ ಯಾವುದೇ ಸಂಶಯ ಬೇಡ ಎಂದರು.

ಮತದಾರರು ತಾವು ಮಾಡಿರುವ ಮತದಾನದ ಬಗ್ಗೆ ಖಾತ್ರಿಪಡಿಸಲು ವಿವಿಪ್ಯಾಟ್ ಮೂಲಕ ಸಾಧ್ಯವಾಗಲಿದೆ. ಇದು ಈ ಬಾರಿಯ ಚುನಾವಣೆಯ ವಿಶೇಷತೆಯಾಗಿದೆ. ಮತದಾರರ, ರಾಜಕೀಯ ಪಕ್ಷಗಳ ಮುಖಂಡರ ಆಗ್ರಹದ ಮೇರೆಗೆ ಚುನಾವಣಾ ಆಯೋಗ ಈ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಿದೆ. ಇವಿಎಂ ಯಂತ್ರದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು `ವಿವಿಪ್ಯಾಟ್’ ವೀಕ್ಷಣೆಯ ಮೂಲಕ ದೂರ ಮಾಡಬಹುದು ಎಂದು ತಿಳಿಸಿದರು.

ಮತದಾರರಲ್ಲಿ ವಿಶ್ವಾಸ ತುಂಬುವುದೇ ಇದರ ಮುಖ್ಯ ಉದ್ದೇಶವಾಗಿದೆ. ಚುನಾವಣೆಯ ದಿನದಂದು ಮತದಾನಕ್ಕೆ ಮುನ್ನ ರಾಜಕೀಯ ಪಕ್ಷಗಳ ಏಜೆಂಟರ ಸಮ್ಮುಖವೇ ಪ್ರಾತ್ಯಕ್ಷಿಕೆ ನಡೆಯಲಿದೆ. ನೀವು ಚಲಾಯಿಸಿದ ಮತವು ಇವಿಎಂ ಯಂತ್ರ ಮತ್ತು ವಿವಿಪ್ಯಾಟ್ ಮಧ್ಯೆ ತಾಳೆಯಾಗದಿದ್ದರೆ ತಕ್ಷಣ ಮತಗಟ್ಟೆ ಅಧಿಕಾರಿಗಳ ಗಮನ ಸೆಳೆಯಬಹುದು. ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಜರುಗಿಸಲಿದ್ದಾರೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English