ಮಂಗಳೂರು: ತನ್ನ ಭಾವಚಿತ್ರ ಹಾಗೂ ಹೆಸರು ಬಳಸಿ ಮಾನಸಿಕ ಹಿಂಸೆ, ಮಾನಹಾನಿ ಮಾಡಿದ್ದಾರೆಂದು ಆರೋಪಿಸಿ ಕೇಂದ್ರ ಕಾನೂನು ಸಚಿವ ಹಾಗೂ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಸಹಿತ ವಿರುದ್ಧ ಮೂವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಹಿಳಾ ಕಾಂಗ್ರೆಸ್ ಮುಖಂಡೆ, ಕಾರ್ಪೊರೇಟರ್ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಇತ್ತೀಚೆಗೆ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷದ ವಿರುದ್ಧದ ಚಾರ್ಜ್‌ಶೀಟ್‌ನಲ್ಲಿ ನನಗೆ ಸಂಬಂಧಪಡದ ವಿಷಯದಲ್ಲಿ ನನ್ನ ಭಾವಚಿತ್ರ ಹಾಗೂ ಹೆಸರು ಬಳಸಿ ಮಾನಹಾನಿ ಉಂಟು ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಇಂದು ಸಂಜೆ ಮಂಗಳೂರು ನ್ಯಾಯಾಲಯದಲ್ಲಿ ನ್ಯಾಯವಾದಿ ಅರುಣ್ ಬಂಗೇರ ಅವರ ಮೂಲಕ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ತಿಳಿಸಿದರು.
ಬಿಜೆಪಿ ರವಿವಾರ ಬಿಡುಗಡೆಗೊಳಿಸಿದ ಕಾಂಗ್ರೆಸ್ ವಿರುದ್ಧದ ಚಾರ್ಜ್‌ಶೀಟ್ ಪುಸ್ತಕದಲ್ಲಿ ‘‘ಮುಖ್ಯಮಂತ್ರಿ ಭಾಗಿಯಾಗಿದ್ದ ಬಿಬಿಎಂಪಿಯ ಕಾರ್ಯಕ್ರಮದಲ್ಲಿ ಜೆಡಿಎಸ್ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣ ಸ್ವಾಮಿ ಸೀರೆಯನ್ನು ಎಳೆದಾಡಿದ್ದಂತೂ ಕಾಂಗ್ರೆಸ್ ನೆರಳಲ್ಲಿ ದುರುಳ ಶಕ್ತಿಗಳ ಉಪಟಳ ಎಷ್ಟು ಹೆಚ್ಚಿದೆ ಎಂಬುದಕ್ಕೆ ನಿದರ್ಶನವಾಗಿದೆ. ಹಾಗೆಯೇ ಶಾಸಕ ಮುನಿರತ್ನ ಬೆಂಬಲಿಗರ ಮರ್ಜಿಯಲ್ಲಿರಲು ನಿರಾಕರಿಸಿದ ಬಿಜೆಪಿ ಪಾಲಿಕೆ ಸದಸ್ಯೆ ಮಮತಾ ವಾಸುದೇವ್ ಅವರಿಗೆ ದಿನನಿತ್ಯ ಕಿರುಕುಳ ನೀಡಲಾಗುತ್ತಿದೆ.
ಸುಳ್ಳು ಮೊಕದ್ದಮೆ ಹೂಡಿ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕುತಂತ್ರ ನಡೆಯುತ್ತಿದೆ. ಮಹಿಳಾ ಸಬಲೀಕರಣದ ಬಗ್ಗೆ ಭಾಷಣ ಬಿಗಿಯುವ ಕಾಂಗ್ರೆಸ್ ಮುಖಂಡರಿಗೆ ತಮ್ಮದೇ ಶಾಸಕ, ಮಹಿಳಾ ಜನಪ್ರತಿನಿಧಿಗಳಿಗೆ ನೀಡುತ್ತಿರುವ ಕಿರುಕುಳ ಕಾಣುವುದಿಲ್ಲ’’ ಎಂಬ ಹೇಳಿಕೆ ಪ್ರಕಟಿಸಲಾಗಿದೆ. ಈ ಹೇಳಿಕೆಗೆ ತನ್ನ ಹೆಸರು, ಭಾವಚಿತ್ರ ಬಳಸಿ ಮಾನಸಿಕ ಹಿಂಸೆ ನೀಡಲಾಗಿದೆ ಎಂದು ಪ್ರತಿಭಾ ಕುಳಾಯಿ ತಿಳಿಸಿದರು. ಈ ಸಂಬಂಧ ಮಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಇದು ಸಿವಿಲ್ ಪ್ರಕರಣವಾಗಿರುವುದರಿಂದ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಕಮಿಷನರ್ ಸೂಚಿಸಿದ್ದರು. ಅದರಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ನಿರ್ಧರಿಸಿದ್ದೇನೆ ಎಂದು ಪ್ರತಿಭಾ ಕುಳಾಯಿ ಹೇಳಿದರು.
ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಕ್ಕೆ ಚಾರ್ಜ್‌ಶೀಟ್‌ನಂತಹ ಸಣ್ಣ ಪುಸ್ತಕವನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿರುವಾಗ ದೇಶವನ್ನು ಸಮರ್ಥವಾಗಿ ಆಳ್ವಿಕೆ ನಡೆಸಲು ಹೇಗೆ ಸಾಧ್ಯ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಆ ಪಕ್ಷಕ್ಕೆ ಮತ ನೀಡುವ ಬಗ್ಗೆ ಚಿಂತನೆ ನಡೆಸಬೇಕು ಎಂದರು.
Click this button or press Ctrl+G to toggle between Kannada and English