ಮಂಗಳೂರು: ದ.ಕ. ಜಿಲ್ಲಾ ಸ್ವೀಪ್ ವತಿಯಿಂದ ಮತದಾರರ ಜಾಗೃತಿ ಅಂಗವಾಗಿ ಆಯೋಜಿಸಲಾದ ಮಾನವ ಸರಪಳಿಯಲ್ಲಿ ನಗರದ ಕಾಲೇಜು ವಿದ್ಯಾರ್ಥಿಗಳ ಜತೆ ಮಂಗಳೂರು ಮಹಾನಗರ ಪಾಲಿಕೆಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಸಾಥ್ ನೀಡಿದರು.
ಮನಪಾ ಕಚೇರಿ ಆವರಣದಲ್ಲಿ ಸಮಾವೇಶಗೊಂಡ ವಿದ್ಯಾರ್ಥಿಗಳು, ಸಿಬ್ಬಂದಿ, ಎನ್‌ಜಿಒ ಸಂಸ್ಥೆ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಆರಂಭದಲ್ಲಿ ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ದ.ಕ. ಜಿಲ್ಲಾ ಸ್ವೀಪ್ ಅಧ್ಯಕ್ಷ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತಿಯಲ್ಲಿ ಪ್ರತಿಜ್ಞಾ ವಿಧಿ ಬಳಿಕ ಮತದಾನದ ಮಹತ್ವವನ್ನು ಸಾರುವ ಭಿತ್ತಿ ಪತ್ರಗಳೊಂದಿಗೆ ಅಲ್ಲಿ ಜಮಾಯಿಸಿದ್ದವರು ಪಾಲಿಕೆ ಕಟ್ಟಡದ ಎದುರು ರಸ್ತೆ ಬದಿಯಲ್ಲಿ ಮಾನವ ಸರಪಳಿ ರಚಿಸಿದರು.
ಈ ಮೂಲಕ ಮನಪಾ ಕಚೇರಿ ಎದುರಿನ ರಸ್ತೆಗಳಲ್ಲಿ ಸಾಗುತ್ತಿದ್ದ ವಾಹನಗಳ ಪ್ರಯಾಣಿಕರು, ಚಾಲಕರು ಹಾಗೂ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಮತದಾನದ ಮಹತ್ವದ ಬಗ್ಗೆ ಗಮನ ಸೆಳೆಯಲಾಯಿತು. ಇದೇ ವೇಳೆ ಸ್ವೀಪ್ ವತಿಯಿಂದ ನಗರದ ವಿವಿಧ ಕಡೆ ಸಂಚರಿಸುತ್ತಿರುವ ಪ್ರಚಾರ ವಾಹನದ ಮೂಲಕವೂ ಪ್ರಚಾರ ನಡೆಸಲಾಯಿತು.
ಈ ಸಂದರ್ಭ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ, ಮತದಾರರ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ವಿಶೇಷ ಮಾನವ ಸರಪಳಿ ನಡೆಸಲಾಗಿದೆ. ನಗರ ಪಾಲಿಕೆ ಉದ್ಯೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500ರಷ್ಟು ಮಂದಿ ಭಾಗವಹಿಸಿದ್ದಾರೆ. ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯುವ ಪ್ರಯತ್ನವಾಗಿ ಈ ಕಾರ್ಯಕ್ರಮ ನಡೆಸಲಾಗಿದೆ ಎಂದರು.
ಮಾನವ ಸರಪಳಿಯಲ್ಲಿ ಭಾಗವಹಿಸಿದ್ದ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಅವರೆಲ್ಲರಿಗೂ ಇದು ಮೊದಲ ಮತದಾನ ವಾಗಿರುವುದರಿಂದ ಮತದಾನದ ಬಗ್ಗೆ ಒಂದು ತೆರನಾದ ಹುಮ್ಮಸ್ಸು ಇರುತ್ತದೆ. ಅವರು ಮತಗಟ್ಟೆಗೆ ತೆರಳಿ ತಮ್ಮ ಸಂವಿಧಾನದತ್ತ ಹಕ್ಕನ್ನು ಚಲಾಯಿಸುವ ಮೂಲಕ ಇತರರಿಗೂ ಪ್ರೋತ್ಸಾಹ ನೀಡಬೇಕಿದೆ. ಈ ಮೂಲಕ ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸೇಕಾಗಿದೆ ಎಂದು ಅವರು ಹೇಳಿದರು.
Click this button or press Ctrl+G to toggle between Kannada and English