ಪುತ್ತೂರು: ಪಕ್ಷದ ಮೇಲೆ ನನಗೆ ಹಾಗೂ ಪತ್ನಿಗಿದ್ದ ಅಪಾರ ಪ್ರೀತಿ, ಕಾಳಜಿ ಹಾಗೂ ಆ ಸಮಯದಲ್ಲಿ ಪಕ್ಷಕ್ಕೆ ತೊಂದರೆಯಲ್ಲಿದೆಯಲ್ಲಾ ಎಂಬ ಭೀತಿ ಆಕೆ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಲು ದಾರಿ ಮಾಡಿಕೊಟ್ಟಿತು ಎನ್ನುತ್ತಾರೆ 2008ರಿಂದ 2013ರ ತನಕ ಪುತ್ತೂರು ಶಾಸಕರಾಗಿ ಕಾರ್ಯನಿರ್ವಹಿಸಿದ ಮಲ್ಲಿಕಾ ಪ್ರಸಾದ್ ಅವರ ಪತಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ| ಎಂ.ಕೆ. ಪ್ರಸಾದ್.
ಶಕುಂತಳಾ ಟಿ. ಶೆಟ್ಟಿ ಬಿಜೆಪಿಗೆ ಬಂಡಾಯವಾಗಿ ಸ್ಪರ್ಧಿ ಸಲು ಸಿದ್ಧತೆ ನಡೆಸಿದರು. ಅವರೆದುರು ಮಹಿಳಾ ಅಭ್ಯರ್ಥಿಯ ಸ್ಪರ್ಧೆ ಬಿಜೆಪಿಗೆ ಅನಿವಾರ್ಯವಾಗಿತ್ತು. ಎಲ್ಲರೂ ಸೇರಿ ಮಲ್ಲಿಕಾಪ್ರಸಾದ್ ಸ್ಪರ್ಧೆಗೆ ನಿರ್ಧರಿಸಿದೆವು. ಅದುವರೆಗೆ ಆರೆಸ್ಸೆಸ್, ಬಿಜೆಪಿ ಮಹಿಳಾ ಮೋರ್ಚಾದಲ್ಲಿ ತೊಡಗಿಸಿಕೊಂಡಿದ್ದ ಆಕೆ ರಾಜಕೀಯಕ್ಕೆ ಅನಿರೀಕ್ಷಿತರಾಗಿ ಧುಮುಕಿ ಶಾಸಕಿಯೂ ಆದರು.
ರಾಜಕೀಯ ಅನುಭವ ಇಲ್ಲದಿದ್ದರೂ ಕ್ಷೇತ್ರದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿಸಿದ್ದಾರೆ. ಪ್ರಮುಖವಾದ ಕಬಕ-ವಿಟ್ಲ ರಸ್ತೆ, ನೂಜಿಬೈಲು-ಪೆರ್ನಾಜೆ ರಸ್ತೆ, ಮುಂಡೂರು-ತಿಂಗಳಾಡಿ ರಸ್ತೆ, ಬೊಳುವಾರು-ಪಟ್ನೂರು ರಸ್ತೆ, ಬೊಳುವಾರು-ಪಡೀಲ್ ರಸ್ತೆ, ನಗರದ ಮುಖ್ಯರಸ್ತೆ ದ್ವಿಪಥ ಕಾಮಗಾರಿ, ಪುತ್ತೂರು ಬಸ್ ನಿಲ್ದಾಣ, ಕೆಎಸ್ ಆರ್‌ಟಿಸಿ ವಿಭಾಗ ಕಚೇರಿ, ಮಿನಿ ವಿಧಾನಸೌಧ, ಸರಕಾರಿ ಮಹಿಳಾ ಪ.ಪೂ. ಕಾಲೇಜಿಗೆ ಕಟ್ಟಡ, ಶಾಲೆಗಳಿಗೆ ಸೌಕರ್ಯ, ಮಾಟ್ನೂರು ಸೇತುವೆ, ಭೂ ಮಂಜೂರಾತಿ ಸೇರಿದಂತೆ ನಿರಂತರ ಅಭಿವೃದ್ಧಿ ಕೆಲಸಗಳನ್ನು ಆಕೆಯ ಅವಧಿಯಲ್ಲಿ ನಡೆಸಲಾಗಿದೆ. ಸೀಮೆಯ ಪ್ರಧಾನ ಶ್ರೀ ಮಹಾಲಿಂಗೇಶ್ವರ ದೇವಾಲಯದ ಬ್ರಹ್ಮಕಲಶೋತ್ಸವವೂ ಅದೇ ಅವಧಿಯಲ್ಲಿ ಯಶಸ್ವಿಯಾಗಿ ನಡೆದಿತ್ತು.
ಪತ್ನಿಯನ್ನು ನಾನು ಆರ್ಥಿಕ ಉದ್ದೇಶಕ್ಕಾಗಿ ಚುನಾವಣೆಗೆ ನಿಲ್ಲಿಸಿರಲಿಲ್ಲ. ರಾಜಕೀಯ ಬದುಕಿನ ಖರ್ಚುಗಳನ್ನು ನನ್ನ ಕೈಯಿಂದಲೇ ಭರಿಸಿದ್ದೇನೆ. ರಾಜಕೀಯದಲ್ಲಿ ನಾನಾಗಲಿ, ಪತ್ನಿಯಾಗಲಿ ಒಂದು ಪೈಸೆಯನ್ನೂ ಮಾಡಿಲ್ಲ ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಶುದ್ಧಹಸ್ತದಿಂದ ಕೆಲಸ ಮಾಡಿದ ತೃಪ್ತಿ ನಮಗೆಲ್ಲರಿಗೂ ಇದೆ. ಮಲ್ಲಿಕಾ ಶುದ್ಧಹಸ್ತದ ಶಾಸಕಿ ಎಂದು ಕಾರ್ಯಕರ್ತರು, ವಿರೋಧಿಗಳೂ ಹೇಳುವಾಗ ಅತ್ಯಂತ ಹೆಮ್ಮೆ ಎನಿಸುತ್ತದೆ ಎನ್ನುತ್ತಾರೆ ಡಾ| ಎಂ.ಕೆ. ಪ್ರಸಾದ್.
ಒಂದು ಅವಧಿಯ ಶಾಸಕತ್ವದ ಬಳಿಕ ಆರ್ಥಿಕ ಹಾಗೂ ವೈಯಕ್ತಿಕವಾಗಿ ಆದ ತೊಂದರೆಯಿಂದ ಸ್ಥಾನವನ್ನು ಬಿಟ್ಟುಕೊಟ್ಟಿದ್ದೇವೆ ಮತ್ತು ಪಕ್ಷದ ಮುಂದಿನ ಅಭ್ಯರ್ಥಿಗೆ ಮನಃಪೂರ್ವಕ ಸಹಕಾರ ನೀಡಿದ್ದೇವೆ. ನನ್ನ ಪತ್ನಿ ಇನ್ನು ಮುಂದೆ ಸ್ಪರ್ಧಿಸುವುದಿಲ್ಲ. ಹಲವು ದಶಕಗಳಿಂದ ಪಕ್ಷಕ್ಕೆ ನಿಷ್ಠರಾಗಿ ಸಂಕಷ್ಟದ ಸಮಯದಲ್ಲಿ ಹೆಗಲುಕೊಟ್ಟು ಪ್ರಾಮಾಣಿಕವಾಗಿ ಶ್ರಮಿಸಿದ ಖುಷಿ ಇದೆ.
Click this button or press Ctrl+G to toggle between Kannada and English