ಮಂಗಳೂರು: ದ.ಕ. ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಯುವ ಕಾಂಗ್ರೆಸ್ ಶಕ್ತಿ ಮೀರಿ ಶ್ರಮಿಸಲಿದೆ. ರಾಹುಲ್ ಗಾಂಧಿ ದೇಶದ ಪ್ರಧಾನಿ ಹುದ್ದೆ ಅಲಂಕರಿಸುವಂತೆ ಮಾಡುವುದು ಯುವ ಕಾಂಗ್ರೆಸ್‌ನ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಕಾರ್ಯನಿರ್ವಹಿಸಲಿದೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಲ್ಕಿ- ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ತಾನು ಕಳೆದ ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಪಕ್ಷವನ್ನು ಬಲಪಡಿಸಿದ್ದರಿಂದ ಸಹಜವಾಗಿ ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಟಿಕೆಟ್ ಸಿಗದಿರುವುದರಿಂದ ನೋವುಂಟಾಗಿತ್ತು. ಆದರೆ ನನಗೆ ಯಾರ ಮೇಲೂ ಬೇಸರವಿಲ್ಲ. ಪಕ್ಷ ನನಗೆ ಮುಂದೆ ಉತ್ತಮ ಅವಕಾಶ ನೀಡಬಹುದು ಎಂದರು.
ಟಿಕೆಟ್ ಪಟ್ಟಿ ಬಿಡುಗಡೆ ಬಳಿಕ ನಾನು ದಿಲ್ಲಿಗೆ ತೆರಳಿದ್ದಾಗ ರಾಹುಲ್ ಗಾಂಧಿ ಕರೆದು ಮಾತನಾಡಿಸಿದ್ದು, ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ಯುವ ಕಾಂಗ್ರೆಸ್ ಸಕ್ರಿಯವಾಗುವಂತೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ಯುವ ಕಾಂಗ್ರೆಸ್ ನಿರ್ಧರಿಸಿದೆ ಎಂದರು.
ತನಗೆ ಟಿಕೆಟ್ ಸಿಗದ ಬೇಸರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್‌ನ ಕೆಲವು ಪದಾಧಿಕಾರಿಗಳು ಇತ್ತೀಚೆಗೆ ಸಲ್ಲಿಸಿದ್ದ ರಾಜೀನಾಮೆಯನ್ನು ತಿರಸ್ಕರಿಸಿರುವುದಾಗಿ ಪಕ್ಷದ ಜಿಲ್ಲಾ ಅಧ್ಯಕ್ಷರು ತಿಳಿಸಿದ್ದಾರೆ. ನಾವೆಲ್ಲರೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದೇವೆ. ರಾಹುಲ್ ಗಾಂಧಿಯವರನ್ನು ಭಾರತದ ಪ್ರಧಾನಿ ಹುದ್ದೆಗೇರಿಸುವುದು ಯುವ ಕಾಂಗ್ರೆಸ್‌ನ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಈಗಲೇ ಕಾರ್ಯನಿರತವಾಗಲಿದ್ದೇವೆ ಎಂದು ಮಿಥುನ್ ರೈ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಜಿಲ್ಲಾ ಉಸ್ತುವಾರಿ ಯು.ಬಿ.ವೆಂಕಟೇಶ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮೆರಿಲ್ ರೇಗೊ, ತೌಸೀಫ್, ಗಿರೀಶ್ ಆಳ್ವ, ಸಿದ್ದೀಕ್, ಕಿರಣ್, ಸುಹೈಲ್, ರೂಪೇಶ್, ರಮಾನಂದ ಪೂಜಾರಿ, ಉತ್ತಮ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English