ಮಂಗಳೂರು: ಮುಂಬರುವ ಚುನಾವಣೆಗೆ ಕಾಂಗ್ರೆಸ್ ಅತೀ ಜತನದಿಂದ ತಯಾರಿಸಿರುವ ಚುನಾವಣಾ ಪ್ರಣಾಳಿಕೆ ಇಂದು ಮಂಗಳೂರಿನಲ್ಲಿ ಬಿಡುಗಡೆಯಾಗಲಿದೆ.ಮಂಗಳೂರಿನ ಟಿ.ಎಂ.ಎ ಪೈ ಕನ್ವೆನ್ಷನ್ ಹಾಲ್ ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಈ ಕುರಿತು ಗುರುವಾರ ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ನ ಚುನಾವಣಾ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ.ಎಂ. ವೀರಪ್ಪ ಮೊಯ್ಲಿ, “ಈವರೆಗೆ ರಾಜಕೀಯ ಇತಿಹಾಸದಲ್ಲಿ ಯಾವ ರಾಜಕೀಯ ಪಕ್ಷವೂ ಬಿಡುಗಡೆಗೊಳಿಸದ ರೀತಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದೇವೆ,” ಎಂದು ಹೇಳಿದರು.
ಪ್ರಣಾಳಿಕೆಗಾಗಿ 15 ಮಂದಿಯ ತಂಡ 4 ತಿಂಗಳು ಶ್ರಮ ವಹಿಸಿದ್ದು ರಾಜ್ಯದ ಸರ್ವ ಜನರ ಸರ್ವಾಂಗೀಣ ಅಭಿವೃದ್ಧಿ, ರಾಜ್ಯದ ಸಮಗ್ರ ಅಭಿವೃದ್ಧಿ, ಯುವಕರಿಗೆ ಉದ್ಯೋಗ , ಮಹಿಳೆಯರ ರಕ್ಷಣೆ, ಶಿಕ್ಷಣ, ಆರೋಗ್ಯ, ಪರಿಸರ ರಕ್ಷಣೆ, ಶುಚಿತ್ವ, ಮೂಲಭೂತ ಸೌಕರ್ಯ ಇನ್ನಿತರ ಅತ್ಯಂತ ಪ್ರಮುಖ ವಿಚಾರಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಾಮುಖ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಶುಕ್ರವಾರ ಮುಂಜಾನೆ ಮಂಗಳೂರಿಗೆ ಆಗಮಿಸುವ ರಾಹುಲ್ ಗಾಂಧಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿ ಬಂಟ್ವಾಳಕ್ಕೆ ತೆರಳಲಿದ್ದಾರೆ ಎಂದು ಹೇಳಿದ ಅವರು ಬಿಡುಗಡೆಗೊಳ್ಳುವ ಈ ಪ್ರಣಾಳಿಕೆ ಕುರಿತು ರಾಜ್ಯದ ನಾಲ್ಕು ಕಡೆ ಸಂವಾದ ಕೂಡ ನಡೆಯಲಿದೆ ಎಂದು ಮಾಹಿತಿ ನೀಡಿದರು.
Click this button or press Ctrl+G to toggle between Kannada and English