‘ಹಿಂದುತ್ವ’ದ ಹೆಸರಲ್ಲಿ ಮತ ಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಪತ್ನಿ

12:26 PM, Saturday, April 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

vedavyas-kamathಮಂಗಳೂರು: ಇಲ್ಲಿನ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪತ್ನಿ ಹಿಂದುತ್ವದ ಹೆಸರಲ್ಲಿ ಮತ ಯಾಚನೆ ಮಾಡಿದ್ದರೆನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ.

ಈ ವೀಡಿಯೊದಲ್ಲಿ ಕೆಲವು ಮಹಿಳೆಯರು ಬಿಜೆಪಿಗೆ ಮತಯಾಚನೆ ಮಾಡಲು ಬಂದಿದ್ದಾರೆ. ಆ ಪೈಕಿ ಓರ್ವ ಮಹಿಳೆ ” ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಧರ್ಮಪತ್ನಿಯವರೇ ನಿಮ್ಮಲ್ಲಿ ಮತಯಾಚನೆಗೆ ಬಂದಿದ್ದಾರೆ, ಅವರು ನಿಮ್ಮಲ್ಲಿ ಮಾತನಾಡಲಿದ್ದಾರೆ” ಎಂದು ಹೇಳುತ್ತಾರೆ.

ಬಳಿಕ ಮಾತನಾಡುವ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪತ್ನಿ “ನಾನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ಪತ್ನಿ. ಈ ಬಾರಿ ಅವರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಹಾಗಾಗಿ ನೀವೆಲ್ಲರೂ ಅವರಿಗೆ ಮತ ನೀಡಿ ಅವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು. ಈ ಬಾರಿ ಇಲ್ಲಿಯೂ ಮತ್ತು ಡೆಲ್ಲಿಯಲ್ಲಿ ಬಿಜೆಪಿ ಸರಕಾರ ಬರಲೇಬೇಕು. ನಿಮಗೆಲ್ಲರಿಗೂ ಗೊತ್ತಿದೆ. ನಮ್ಮ ಹಿಂದುತ್ವ ಉಳಿಬೇಕಾದರೆ ಬಿಜೆಪಿ ಸರ್ಕಾರ ಬರಲೇಬೇಕು. ಧನ್ಯವಾದಗಳು ” ಎಂದು ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದು. ಬಳಿಕ ಅವರ ಜೊತೆಗಿದ್ದವರು ” ಭಾರತ್ ಮಾತಾಕಿ ಜೈ ” ಎಂದು ಘೋಷಣೆ ಕೂಗುತ್ತಾರೆ.

ಇನ್ನೊಂದು ವೀಡಿಯೋದಲ್ಲಿ ಮಹಿಳೆಯೊಬ್ಬರು ಮಾತನಾಡುತ್ತಾ, ”ಸದ್ಯದ ವಾತಾವರಣದಲ್ಲಿ ಮನೆಯಿಂದ ಹೊರಹೋದ ಯುವತಿಯರು ವಾಪಸ್ ಬರುತ್ತಾರೆ ಎನ್ನುವಂತಿಲ್ಲ. ಗೊತ್ತಿದೆಯಲ್ಲ ಏನೆಲ್ಲ ನೋಡುತ್ತಿದ್ದೇವೆ, ಅಕ್ಷತಾಳ ಸ್ಥಿತಿ ಏನಾಯಿತು? ಪುರುಷರು ಮನೆಯಿಂದ ಮತ್ತೆ ಮನೆಗೆ ಬರುತ್ತಾರೆ ಎನ್ನುವಂತಿಲ್ಲ. ಶರತ್ ಮಡಿವಾಳ, ದೀಪಕ್ ರಾವ್…. ನಾಳೆ ನಮ್ಮ ಮಕ್ಕಳು ಮನೆಯಿಂದ ಹೋದವರು ವಾಪಸ್ ಬರುತ್ತಾರೆಂಬುದಕ್ಕೆ ಏನು ಗ್ಯಾರಂಟಿ. ಆದ್ದರಿಂದ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಬರಬಾರದು. ಅದೇವೇಳೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದುತ್ವ ಉತ್ತಮವಾಗಲು, ನಮ್ಮ ಸಂಸೃತಿ ಸಂಸ್ಕಾರವನ್ನು ಉಳಿಸಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಸರಕಾರ ಬಂದ ಬಳಿಕ ಏನು ಮಾಡಿತು… ನಾವು ಆರಾಧಿಸುವ ಎಲ್ಲಾ ಮಠ, ಮಂದಿರ, ದೇವಸ್ಥಾನಗಳನ್ನು ಸರಕಾರೀಕರಣಕ್ಕೆ ಆದೇಶ ಹೊರಡಿಸಿತ್ತು.

ಆದರೆ ನಾವು ಇದರ ವಿರುದ್ಧ ಹೋರಾಟ ನಡೆಸಿದೆವು. ಬಿಜೆಪಿಯಾಗಿದ್ದರೆ ಹೀಗೆಲ್ಲ ಮಾಡುತ್ತಿತ್ತೆ… ಹಿಂದೆ ಯಡಿಯೂರಪ್ಪ ಸರಕಾರದ ಅವಧಿಯಲ್ಲಿ ಹೀಗೆಲ್ಲ ಆಗಿತ್ತೇ… ಇಲ್ಲ ಅಲ್ಲವೇ.. ಹಾಗಾದರೆ ಈಗ ಯಾಕೆ ಹಾಗೆಲ್ಲ ಆಗುತ್ತಿದೆ? ನಮ್ಮ ದೇವಸ್ಥಾನಗಳಿಗೆ ಬಂದಿರುವಂತಹ ಹಣವನ್ನು ಅವರು ಬೇರೆ ಧರ್ಮದವರಿಗೆ, ಬೇರೆ ಪಕ್ಷದವರಿಗೆ ಖರ್ಚು ಮಾಡುತ್ತಿದ್ದಾರೆ. ನಮ್ಮ ದೇವಸ್ಥಾನದ ಹಣ ನಮಗೆ ಉಳಿತಾಯವಾಗಬೇಕಾದರೆ ಈ ಬಾರಿ ಬಿಜೆಪಿ ಸರಕಾರ ಆಡಳಿತಕ್ಕೇರಬೇಕು. ಯಡಿಯೂರಪ್ಪ ಸರಕಾರ ಬರಬೇಕು. ಇದಕ್ಕಾಗಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವೇದವ್ಯಾಸ್ ಕಾಮತ್ ಜಯಿಸಿದರೆ ಮಾತ್ರ ಇದು ಸಾಧ್ಯ. ಇದಕ್ಕೆ ನಾವು ಮನಸು ಮಾಡಬೇಕು. ನಮ್ಮ ಮನೆಯ ಹೆಣ್ಮಕ್ಕಳು ರಕ್ಷಣೆಗೆ, ಮನೆಯಿಂದ ಹೋದ ಗಂಡಸರು ಮತ್ತೆ ಬರುವಂತಾಗಲು, ನಮ್ಮ ದೇವಸ್ಥಾನ ನಮ್ಮಲ್ಲೇ ಉಳಿಯುವಂತಾಗಲು ಬಿಜೆಪಿ ಸರಕಾರ ಬರಬೇಕು” ಎಂದು ಮತ ಯಾಚನೆ ಮಾಡುತ್ತಿದ್ದಾರೆ.

ಈ ವೀಡಿಯೋವನ್ನು ಯಾವುದೋ ಮನೆಯಲ್ಲಿ ಚಿತ್ರೀಕರಿಸಲಾಗಿದೆ. ಮಹಿಳೆಯೊಬ್ಬರು ಈ ರೀತಿ ಮಾತನಾಡುತ್ತಿರುವ ಸಂದರ್ಭ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವೇದವ್ಯಾಸ್ ಅವರ ಪತ್ನಿಯು ಉಪಸ್ಥಿತರಿರುವುದು ಕಂಡುಬರುತ್ತದೆ.

ಈ ಎರಡು ವೀಡಿಯೊಗಳನ್ನು ಯಾವ ಸ್ಥಳದಲ್ಲಿ, ಯಾವ ದಿನ ತೆಗೆದಿರುವುದು ಎಂದು ‘ವಾರ್ತಾ ಭಾರತಿ’ಗೆ ಖಚಿತ ಮಾಹಿತಿ ಸಿಕ್ಕಿಲ್ಲ.

ಧರ್ಮ, ಜಾತಿ ಹೆಸರಲ್ಲಿ ಮತಯಾಚನೆ ಮಾಡುವುದು ಚುನಾವಣಾ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರ ನೇತೃತ್ವದ , ಏಳು ನ್ಯಾಯಾಧೀಶರಿದ್ದ ಸಂವಿಧಾನ ಪೀಠ ಧರ್ಮ, ಜಾತಿ ಹಾಗು ಸಮುದಾಯದ ಹೆಸರಲ್ಲಿ ಮತಯಾಚನೆ ಮಾಡುವುದು ಭ್ರಷ್ಟತೆಯಾಗಿದ್ದು , ಇಂತಹ ಅಭ್ಯರ್ಥಿಯ ಆಯ್ಕೆಯನ್ನು ಅಸಿಂಧುಗೊಳಿಸಬಹುದು ಎಂದು ತೀರ್ಪು ನೀಡಿದೆ.

ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪತ್ನಿ ಹಿಂದುತ್ವದ ಹೆಸರಿನಲ್ಲಿ ಮತ ಯಾಚಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದ್ದೇವೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ವಕ್ತಾರ, ನ್ಯಾಯವಾದಿ ವಿನಯ್‌ರಾಜ್ ಹೇಳಿದ್ದಾರೆ.

‘ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿ ಮತ ಯಾಚಿಸುವ ವೀಡಿಯೋಗಳನ್ನು ನಾವೂ ನೋಡಿದ್ದೇವೆ. ಈ ವಿರುದ್ಧ ದೂರು ನೀಡುತ್ತೇವೆ. ಯಾವುದೇ ಜಾತಿ, ಧರ್ಮದ ಹೆಸರಿನಲ್ಲಿ ನಮ್ಮ ಊರು ಉದ್ಧಾರವಾಗುವುದಿಲ್ಲ. ಊರು ಉದ್ಧಾರವಾಗಬೇಕಾದರೆ ಅಭಿವೃದ್ಧಿ ಕಾರ್ಯಗಳಿಂದ. ಮಂಗಳೂರಿನ ಅಭಿವೃದ್ಧಿಯ ದೃಷ್ಟಿಕೋನದಿಂದ ಮತ ಯಾಚಿಸಿದರೆ, ಜನರಿಗೂ ಅವರಿಗೆ ನಗರದ ಬಗ್ಗೆ ಕಾಳಜಿ ಇದೆ ಎಂಬ ಭಾವನೆ ಬರಲಿದೆ. ಅದರ ಬದಲಿಗೆ ಹಿಂದುತ್ವದ ಕಾರ್ಡ್‌ನಲ್ಲಿ ಮತ ಯಾಚಿಸುವುದು ಮಂಗಳೂರು ನಗರದ ಜನತೆಯನ್ನು ವಿಭಜಿಸುವ ಹುನ್ನಾರ’’ ಎಂದವರು ಹೇಳಿದ್ದಾರೆ.

‘‘ಈ ರೀತಿಯಲ್ಲಿ ಮತ ಯಾಚಿಸುವುದು ಮಂಗಳೂರಿನ ಬೆಳವಣಿಗೆ, ಅಭಿವೃದ್ಧಿ ಬಗ್ಗೆ ಅವರಿಗೆ ಕಾಳಜಿ ಇಲ್ಲ ಎನ್ನುವುದು ತೋರಿಸಿಕೊಡುತ್ತದೆ. ಜನರಿಗೆ ಬೇಕಾಗಿರುವುದು ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ, ವಿದ್ಯುದ್ದೀಕರಣ, ಜನರ ಅಗತ್ಯವನ್ನು ತಿಳಿದು ಜನಪ್ರತಿನಿಧಿಯಾಗುವವ ಅದಕ್ಕೆ ಮುಂದಿನ ದಿನಗಳಲ್ಲಿ ಸ್ಪಂದಿಸುತ್ತೇನೆಂಬ ನಿಟ್ಟಿನಲ್ಲಿ ಮತ ಯಾಚಿಸಬೇಕು. ಅದು ಬಿಟ್ಟು ಹಿಂದುತ್ವ, ಧರ್ಮ, ದನ, ಅಥವಾ ದೇವರ ಹೆಸರಿನಲ್ಲಿ ಮತ ಯಾಚಿಸುವುದು ಅದು ಅಭಿವೃದ್ಧಿಗೆ ಪೂರಕವಾದುದಲ್ಲ. ಇದು ಸಮಾಜವನ್ನು ಒಡೆಯುವಂತದ್ದು’’ ಎಂದು ವಿನಯ್‌ರಾಜ್ ಪ್ರತಿಕ್ರಿಯಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English