ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೇವಲ 11 ದಿನಗಳು ಮಾತ್ರ ಬಾಕಿಯಿದೆ. ಅದರಲ್ಲೂ ರಾಜಕೀಯ ಪಕ್ಷಗಳಿಗೆ ತಮ್ಮ ಪರ ಪ್ರಚಾರ ನಡೆಸಲು ಬೆರಳೆಣಿಕೆಯ ದಿನಗಳು ಮಾತ್ರವಿದೆ. ಆದರೆ ಈ ಬಾರಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಪಕ್ಷಗಳಿಗೆ ಮನೆ ಮನೆಗಳಿಗೆ ಭೇಟಿ ನೀಡಿ ಮತಯಾಚಿಸಲು ಬಿಸಿಲು ಅಡ್ಡಿಯಾಗಿದೆ.ಹೌದು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಅತೀ ಹೆಚ್ಚು ಉಷ್ಣಾಂಶ ದಾಖಲಾಗುತ್ತಿರುವ ಕಾರಣಕ್ಕಾಗಿ ಎಲ್ಲಾ ಪಕ್ಷದ ಕಾರ್ಯಕರ್ತರು ಬಿಸಿಲಿನ ಝಳ ತಪ್ಪಿಸುವ ನಿಟ್ಟಿನಲ್ಲಿ ತಮ್ಮ ಪ್ರಚಾರದ ಸಮಯವನ್ನೇ ಬದಲಾವಣೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದಾರೆ.
ಮತಬೇಟೆ ಆರಂಭ ರಾಜ್ಯದ ವಿಧಾನಸಭಾ ಚುನಾವಣೆ ಮೇ 12 ರಂದು ನಡೆಯಲಿದ್ದು, ಫಲಿತಾಂಶ ಮೇ 15 ಕ್ಕೆ ಪ್ರಕಟಗೊಳ್ಳಲಿದೆ. ಮೇ 15 ಪ್ರಕಟಗೊಳ್ಳುವ ಫಲಿತಾಂಶ ತನ್ನ ಪರ ಹಾಗೂ ತನ್ನ ಪಕ್ಷದ ಪರವಿರಲಿ ಎನ್ನುವ ಕಾರಣಕ್ಕಾಗಿ ಎಲ್ಲಾ ಪಕ್ಷಗಳೂ ತಮ್ಮ ಮತಬೇಟೆಯನ್ನು ಈಗಾಗಲೇ ಆರಂಭಿಸಿದೆ. ಹೆಚ್ಚಿನ ಉಷ್ಣಾಂಶ ದಾಖಲು ಅಭ್ಯರ್ಥಿಗಳು ಬಹಿರಂಗ ಸಭೆಗಳಿಗಿಂತ ಮನೆ ಮನೆಗೆ ಭೇಟಿ ಕಾರ್ಯಕ್ರಮವನ್ನು ಹೆಚ್ಚಾಗಿ ನಡೆಸುವುದರಿಂದ ಕರಾವಳಿಯ ಬಿಸಿಲು ಅಭ್ಯರ್ಥಿಗಳ ಉತ್ಸಾಹಕ್ಕೆ ತಣ್ಣಿರೇರೆಚಿದೆ. ಜಿಲ್ಲೆಯಲ್ಲಿ ಪ್ರತಿದಿನ 35 ಡಿಗ್ರಿ ಸೆಲ್ಸಿಯಸ್ ಗಿಂತ ಜಾಸ್ತಿ ಉಷ್ಣಂಶ ದಾಖಲಾಗುತ್ತಿದೆ.
ಈ ಕಾರಣಕ್ಕಾಗಿ ಬಿಸಿಲಿಗೆ ಮನೆ ಮನೆಗೆ ಭೇಟಿ ನೀಡುವುದು ಕಾರ್ಯಕರ್ತರಿಗೆ ಕಷ್ಟ ಸಾಧ್ಯವಾಗಿದೆ. ಪ್ರಚಾರ ಸಮದಲ್ಲಿ ಬದಲಾವಣೆ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಪ್ರಚಾರ ಸಮಯದಲ್ಲಿ ಬದಲಾವಣೆಯನ್ನೂ ಮಾಡಿಕೊಳ್ಳಲಾಗಿದೆ. ಮುಂಜಾನೆಯಿಂದ ಆರಂಭಗೊಂಡ ಪ್ರಚಾರ ಮಧ್ಯಾಹ್ನದ ಒಳಗೆ ನಿಲ್ಲಿಸಲಾಗುತ್ತದೆ. ಬಳಿಕ ಮಧ್ಯಾಹ್ನ 3 ಗಂಟೆಯ ಬಳಿಕ ಮಧ್ಯರಾತ್ರಿವರೆಗೂ ಪ್ರಚಾರ ಕಾರ್ಯದಲ್ಲಿ ತೊಡಗುತ್ತಿದ್ದಾರೆ.
ಉರಿ ಬಿಸಿಲು ಲೆಕ್ಕಕ್ಕಿಲ್ಲ ಎಲ್ಲಾ ಪಕ್ಷಗಳ ಕಾರ್ಯಕರ್ತರಿಗೂ ಈ ಬಾರಿ ಬಿಸಿಲು ಭಾರೀ ಹೊಡೆತವನ್ನು ನೀಡಿದೆ. ಚುನಾವಣಾ ಕಾವಿನ ಜೊತೆಗೆ ಬಿಸಿಲಿನ ಬೇಗೆಯೂ ಹೆಚ್ಚಾಗುತ್ತಿದೆ. ಹೇಗಾದರೂ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲ್ಲಿಸಬೇಕು ಎನ್ನುವ ದೃಷ್ಟಿಯಲ್ಲಿ ಉರಿ ಬಿಸಿಲನ್ನು ಲೆಕ್ಕಿಸದೆಯೂ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English