ಮಂಗಳೂರು: ಬಿಜೆಪಿ ಪರ ಪ್ರಚಾರ ಕೈಗೊಳ್ಳಲು ಶನಿವಾರ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರಿನ ನೆಹರೂ ಮೈದಾನಕ್ಕೆ ಆಗಮಿಸಿ ವಾಪಸ್ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಸಮಯದಲ್ಲಿ ವಿವಿಐಪಿ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಟು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 9-00 ಗಂಟೆಯವರೆಗೆ ಮಂಗಳೂರು ಕೆಂಜಾರು ವಿಮಾನನಿಲ್ದಾಣದಿಂದ ನೆಹರೂ ಮೈದಾನದವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲ ತರಹದ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಅನವಶ್ಯಕ ವಾಹನಗಳನ್ನು ನಿಲ್ಲಿಸುವಂತಿಲ್ಲ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English