ಬಂಟ್ವಾಳ: “ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಗೆ ಮಾನಸಿಕ ಹಿಂಸೆ ನೀಡಿರುವುದು ಸಚಿವ ರಮಾನಾಥ ರೈ ಅವರೇ ಹೊರತು ನಾನಲ್ಲ” ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾನು ಅವರಿಗೆ ಮಾನಸಿಕ ಹಿಂಸೆ ನೀಡಿದ್ದರೆ, ಕಳೆದ 35 ವರ್ಷಗಳ ಕಾಲ ಪೂಜಾರಿಯವರ ಜೊತೆಯಲ್ಲಿರುತ್ತಿರಲಿಲ್ಲ ಎಂದರು.
ರಮಾನಾಥ ರೈ ಮುಂದೆ ಸದಾ ಕೈ ಕಟ್ಟಿ ನಿಲ್ಲುವ ಬೇಬಿ ಕುಂದರ್ ಎಂಬವರು ರಮಾನಾಥ ರೈ ಅವರ ಬ್ರೋಕರ್ ಎಂದು ಟೀಕಾಪ್ರಹಾರಗೈದ ಹರಿಕೃಷ್ಣ ಬಂಟ್ವಾಳ್, ಮಂಗಳೂರಿನ ಕಾಂಗ್ರೆಸ್ ಕಚೇರಿಯನ್ನು ಉಳಿಸಿದ ಪೂಜಾರಿಯವರಿಗೆ ಅದೇ ಕಚೇರಿಯ ಪ್ರವೇಶಿಸದಂತೆ ಬೀಗ ಹಾಕಿದವರು ಯಾರು? ಎಂದು ಪ್ರಶ್ನಿಸಿದರು. ಸಿಎಂ ಸಿದ್ದರಾಮಯ್ಯ ಬಂಟ್ವಾಳಕ್ಕೆ ಬಂದಾಗ ಮನೆ ಎದುರೇ ಹಾದು ಹೋದರೂ ಪೂಜಾರಿಯವರ ಆರೋಗ್ಯ ವಿಚಾರಿಸಲಿಲ್ಲ. ಕುದ್ರೋಳಿ ದೇವಸ್ಥಾನಕ್ಕೂ ಬಾರದಂತೆ ತಡೆಯಲಾಗಿತ್ತು. ಇಷ್ಟೆಲ್ಲಾ ಪೂಜಾರಿಯವರಿಗೆ ಅವಮಾನ, ಮಾನಸಿಕ ಹಿಂಸೆ ನೀಡಿ ಈಗ ಸೋಲಿನ ಭೀತಿಯಿಂದ ಪೈಪೋಟಿಯಂತೆ ಅವರ ಮನೆಗೆ ತೆರಳಿ ಕಾಲು ಹಿಡಿಯುವ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೂಜಾರಿಯವರ ಸೂಚನೆಯಂತೆ ತಾನು ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ಬಹಿರಂಗಪಡಿಸಿದ್ದೆನೆ. ಇದೀಗ ತನ್ನ ವಿರುದ್ಧ ಮಾತನಾಡಲೆಂದು ಕುಂದರ್, ಜಗದೀಶ ಕೊಯಿಲ, ಸಂಜೀವ ಪೂಜಾರಿಯನ್ನು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದೀಗ ಸೋಲಿನ ಭೀತಿಯಿಂದ ರೈ ಅವರ ಆಪ್ತರು ಮನೆ-ಮನೆ, ಸಂಘ ಸಂಸ್ಥೆಗಳಿಗೆ ರಾತೋರಾತ್ರಿ ಸಾವಿರಾರು ರೂಪಾಯಿ ಹಣ ಹಂಚುವ ಕಾರ್ಯಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದ ಅವರು, ಇಲ್ಲಿ ನ ಚುನಾವಣಾಧಿಕಾರಿ ಅವರ ಕೈ ಕೆಳಗಿನ ಅಧಿಕಾರಿಗಳು ಪಕ್ಷಪಾತಿಯಂತೆ ವರ್ತಿಸುತ್ತಿದ್ದು, ಅದಕ್ಕಾಗಿ ಈ ಬಗ್ಗೆ ದೂರು ಸಲ್ಲಿಸಿಲ್ಲ ಎಂದರು.
ರಮಾನಾಥ ರೈ ಅವರ ಪಾಪದಕೊಡ ತುಂಬಿದ್ದು, ಅವರಿಗೆ ಸೋಲು ನಿಶ್ಚಿತ. ಬಂಟ್ವಾಳದಲೂ ಸ್ವಾಭಿಮಾನಿ ಹಿಂದೂ, ಮುಸ್ಲಿಂ, ಕ್ರೈಸ್ತರು ಬದಲಾವಣೆ ಬಯಸಿದ್ದಾರೆ. ರಮಾನಾಥ ರೈ ಸೋಲುವ ಕೊನೆ ಚುನಾವಣೆ ಇದಾಗಿದ್ದು, ಬಿಜೆಪಿ ಅಭ್ಯರ್ಥಿ ಅತ್ಯಧಿಕ ಮತಗಳಿಂದ ಗೆಲ್ಲಲಿದ್ದಾರೆ ಸಂಶಯ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಕೇತ್ರ ಸಮಿತಿ ಉಪಾಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಸೀತಾರಾಮ ಪೂಜಾರಿ, ಸುರೇಶ್ ಕುಲಾಲ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English