‘ಮೇ 10ರ ಸಂಜೆ 6ರ ಬಳಿಕ ‘ಹೊರಗಿನವರು’ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ’

12:39 PM, Monday, May 7th, 2018
Share
1 Star2 Stars3 Stars4 Stars5 Stars
(No Ratings Yet)
Loading...

electionಮಂಗಳೂರು: ಮತದಾನ ಪ್ರಕ್ರಿಯೆ ಮುಗಿಯುವ 48 ಗಂಟೆಗೆ ಮುನ್ನ ಅಂದರೆ ಮೇ 10ರ ಸಂಜೆ 6 ಗಂಟೆಯ ಬಳಿಕ ಹೊರಗಿನ ಯಾವೊಬ್ಬ ಚುನಾವಣಾ ತಾರಾ ಪ್ರಚಾರಕ, ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು ಜಿಲ್ಲೆಯ ಯಾವೊಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವಂತಿಲ್ಲ. ಎಲ್ಲರೂ ಕ್ಷೇತ್ರ ಬಿಟ್ಟು ಸ್ವಸ್ಥಾನ ಸೇರಬೇಕು.

ನಿಗದಿತ ಸಮಯದ ಬಳಿಕ ಹೊರಗಿನ ಪ್ರಚಾರಕ ಸಹಿತ ಕ್ಷೇತ್ರ ವ್ಯಾಪ್ತಿಯಲ್ಲದವರಿಗೆ ವಸತಿ ವ್ಯವಸ್ಥೆ ಕಲ್ಪಿಸದಂತೆ ಹೊಟೇಲ್, ಛತ್ರ, ವಸತಿಗೃಹದ ಮಾಲಕರಿಗೆ ಸೂಚಿಸಲಾಗಿದೆ. ಈ ಸೂಚನೆ ಮೀರಿ ಜಿಲ್ಲೆಯಲ್ಲಿ ಉಳಕೊಂಡರೆ ಅವರನ್ನು ಹೊರಗೆ ಕಳುಹಿಸಿಕೊಡಲಾಗುವುದು ಎಂದು ಚುನಾವಣಾಧಿಕಾರಿಯೂ ಆದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಮೇ 12ರಂದು ನಡೆಯುವ ಚುನಾವಣೆಗೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಸೂಚಿಸಲಾಗುವ ಎಲ್ಲಾ ಅಂಶಗಳನ್ನೂ ಮತದಾರರು ಹಾಗೂ ವಿವಿಧ ಪಕ್ಷಗಳು, ಅಭ್ಯರ್ಥಿಗಳು ಪಾಲಿಸಬೇಕು. ಅದಕ್ಕಾಗಿ ಈಗಾಗಲೆ ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಭೆ ಕರೆದು ಮಾಹಿತಿ ನೀಡಲಾಗಿದೆ ಎಂದರು.

ಜಿಲ್ಲೆಯ 1,858 ಮತಗಟ್ಟೆಗಳಲ್ಲಿ ಮೇ 12ರಂದು ಬೆಳಗ್ಗೆ ಅಣುಕು ಮತದಾನವನ್ನು ನಡೆಸಲಾಗುತ್ತದೆ. ಹಾಗಾಗಿ ಮತದಾನ ಪ್ರಾರಂಭವಾಗುವ ಮೊದಲು ಎಲ್ಲಾ ಪೋಲಿಂಗ್ ಏಜೆಂಟರು ಮುಂಜಾನೆ 5:45ಕ್ಕೆ ಸರಿಯಾಗಿ ಹಾಜರಿದ್ದು ಮತದಾನ ಮುಕ್ತಾಯವಾಗುವವರೆಗೆ ಮತಗಟ್ಟೆಯಲ್ಲಿ ಉಪಸ್ಥಿತರಿರುವಂತೆ ತಿಳಿಸಲಾಗಿದೆ.

ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ನಿಗದಿಪಡಿಸಿದ ನಮೂನೆ 10ರಲ್ಲಿ ತಮ್ಮ ಪೋಲಿಂಗ್ ಏಜೆಂಟರನ್ನು ಪ್ರತಿಯೊಂದು ಮತಗಟ್ಟೆಗಳಿಗೂ ನೇಮಕ ಮಾಡಲು ಅವಕಾಶವಿರುತ್ತದೆ. ನೇಮಕಾತಿ ಆದೇಶವನ್ನು ಆಯಾಯ ಮತಗಟ್ಟೆಗಳ ಅಧ್ಯಕ್ಷಾಧಿಕಾರಿಗೆ ನೀಡಬೇಕಾಗುತ್ತದೆ ಎಂದರು.ಜಿಲ್ಲೆಯಲ್ಲಿ 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಆವುಗಳಲ್ಲಿ ವೆಬ್‌ಕಾಸ್ಟಿಂಗ್/ಸಿ.ಪಿ.ಎಂ.ಎಫ್ ನಿಯೋಜನೆ/ವೀಡಿಯೊಗ್ರಾಫಿ ಮತ್ತು ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ಪ್ರಜಾಪ್ರತಿನಿಧಿ ಕಾಯ್ದೆಯ ಅನ್ವಯ ಮತದಾನ ಮುಕ್ತಾಯವಾಗುವ ಸಮಯದ ಹಿಂದಿನ 48 ಘಂಟೆಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ (ಎಕ್ಸಿಟ್ ಪೋಲ್) ನಡೆಸುವುದನ್ನು ನಿಷೇಧಿಸಲಾಗಿದೆ. ಅದರಂತೆ ರಾಜಕೀಯ ಪಕ್ಷಗಳು/ಅಭ್ಯರ್ಥಿ ಅಥವಾ ಅವರ ಬೆಂಬಲಿಗರು ಚುನಾವಣಾ ಪ್ರಚಾರಕ್ಕಾಗಿ ಮೇ 11, 12ರಂದು ನೀಡುವ ಜಾಹಿರಾತುಗಳನ್ನು ಜಿಲ್ಲಾ/ರಾಜ್ಯ ಮಟ್ಟದ ಎಂಸಿಎಂಸಿ ಸಮಿತಿಗೆ ಸಲ್ಲಿಸಿ ಅನುಮತಿ ಪಡೆಯಬೇಕು. ಅಂದರೆ ಮೇ 9ರೊಳಗೆ ಈ ಜಾಹಿರಾತಿನ 2 ಪ್ರತಿಗಳನ್ನು ನಮೂನೆ-ಸಿ ಯ ಮಾಹಿತಿಯೊಂದಿಗೆ ಅಪರ ಮುಖ್ಯ ಚುನಾವಣಾಧಿಕಾರಿ, 2ನೇ ಮಹಡಿ, ಪೂರ್ವ ವಿಭಾಗ, ಖಜಾನೆ ಭವನ, ರೇಸ್‌ಕೋರ್ಸ್ ರಸ್ತೆ ಬೆಂಗಳೂರು ಇವರಿಗೆ ಸಲ್ಲಿಸಿ ಅನುಮತಿ ಪಡೆದು ನಂತರ ಪ್ರಕಟಿಸಬೇಕಾಗುತ್ತದೆ ಎಂದರು.ಮತಗಟ್ಟೆಯ ಬಳಿ ಚುನಾವಣಾ ಪ್ರಚಾರ ನಿಷೇಧ: ಮೇ 12ರಂದು ಮತಗಟ್ಟೆಯ 100 ಮೀ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.

ಅಭ್ಯರ್ಥಿಗಳ ಚುನಾವಣಾ ಬೂತು: ಮತಗಟ್ಟೆಯಿಂದ 200 ಮೀ ದೂರದಲ್ಲಿ ಅಭ್ಯರ್ಥಿಯ ಬೂತು ನಿರ್ಮಿಸುವಲ್ಲಿ ಅವಕಾಶವಿರುತ್ತದೆ. ಈ ಬೂತಿನಲ್ಲಿ ಒಂದು ಮೇಜು, 2 ಕುರ್ಚಿಗಳು ಮತ್ತು 3 ಫೀಟ್(/ಗುಣಿಸಿ ಹಾಕಿ/) 1.5 ಫೀಟ್ ಅಗಲದ ಬ್ಯಾನರನ್ನು ಉಪಯೋಗಿಸಬಹುದು. ಆದರೆ ಈ ಬೂತುಗಳನ್ನು ನಿರ್ಮಿಸುವ ಬಗ್ಗೆ ಸ್ಥಳೀಯ ಸಂಸ್ಥೆಗಳಾದ ಗ್ರಾಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಬೇಕಾಗುತ್ತದೆ.ವಾಹನಗಳ ಉಪಯೋಗ : ಚುನಾವಣೆಗೆ ಸಂಬಂಧಿಸಿ ಮೇ 11,12ರಂದು ಅಭ್ಯರ್ಥಿ-1, ಚುನಾವಣೆ ಏಜೆಂಟ್-1, ಪಕ್ಷದ ಕಾರ್ಯಕರ್ತರಿಗೆ -1 ಹೀಗೆ ಮೂರು ವಾಹನಗಳನ್ನು ಅನುಮತಿ ಪಡೆದು ಉಪಯೋಗಿಸಲು ಅವಕಾಶವಿರುತ್ತದೆ. ಈ ವಾಹನದಲ್ಲಿ ವಾಹನ ಚಾಲಕ ಸೇರಿ 5 ಮಂದಿ ಪ್ರಯಾಣಿಸಬಹುದಾಗಿದೆ.

ಮತಗಟ್ಟೆಯೊಳಗೆ ಪ್ರವೇಶ : ಮತದಾರ /ಮತದಾರರ ಕೈಗೂಸು, ಕುರುಡ ಮತ್ತು ದುರ್ಬಲ ಮತದಾರನ ಸಂಗಡಿಗ, ಮತಗಟ್ಟೆ ಸಿಬ್ಬಂದಿ, ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿತ ಅಧಿಕಾರಿಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ/ಅವರ ಚುನಾವಣಾ ಏಜೆಂಟ್, ಮತದಾರನಿಗೆ ಝಡ್‌ಪ್ಲಸ್ ರಕ್ಷಣೆಗೆ ನಿಯೋಜಿತ ಸಮವಸ್ತ್ರ ಧರಿಸದ ಹಾಗೂ ಶಸ್ತ್ರಾಸ್ತ್ರವನ್ನು ಮರೆಮಾಚಿದ ಭದ್ರತಾ ಸಿಬ್ಬಂದಿಗೆ ಮತಗಟ್ಟೆಯೊಳಗೆ ಪ್ರವೇಶ ಕಲ್ಪಿಸಲಾಗುತ್ತದೆ.ಮತದಾರರ ಸೌಲಭ್ಯ ಕೇಂದ್ರ : ಚುನಾವಣೆಗಾಗಿ ಅಳವಡಿಸಲಾದ ಪ್ರತಿಯೊಂದು ಮತಗಟ್ಟೆಯಲ್ಲಿ ಆಲ್ಪಬೆಟಿಕಲ್ ಮತದಾರರ ಪಟ್ಟಿಯ ಸಹಾಯದಿಂದ ಬೂತ್‌ಮಟ್ಟದ ಅಧಿಕಾರಿಯು ಮತದಾರರ ಹೆಸರು ನೋಂದಣಿಯಾಗಿರುವ ಮತದಾರರ ಪಟ್ಟಿಯ ವಿಭಾಗ ಸಂಖ್ಯೆ ಮತ್ತು ಕ್ರಮಸಂಖ್ಯೆಯನ್ನು ಮತದಾರರಿಗೆ ತಿಳಿಸಲು ಸೌಲಭ್ಯ ಕೇಂದ್ರವನ್ನು ತೆರೆಯಲಾಗಿದೆ.

ಸೆ.144ರ ಅನ್ವಯ ನಿಷೇಧಾಜ್ಞೆ : ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಮತದಾನ ದಿನಾಂಕದ 48 ಗಂಟೆಗಳ ಮೊದಲು ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು, ಸಾರ್ವಜನಿಕ ಸಭೆ ನಡೆಸುವುದು, ಮೆರವಣಿಗೆ ನಡೆಸುವುದು ಮತ್ತು ಬಹಿರಂಗ ಪ್ರಚಾರ ಮಾಡುವುದನ್ನು ನಿಷೇಧಿಸುವ ಸಲುವಾಗಿ ಸೆ.144ರನ್ವಯ ಜಿಲ್ಲಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಅಲ್ಲದೆ ಈ ಅವಧಿಯಲ್ಲಿ ಅಭ್ಯರ್ಥಿಗಳು/ಏಜೆಂಟರು/ಬೆಂಬಲಿಗರು ಮತದಾರರ ಮನೆಗಳಿಗೆ ತೆರಳಿ ಚುನಾವಣಾ ಪ್ರಚಾರ ಮಾಡಬಹುದು.

ಮದ್ಯಪಾನ ಮಾರಾಟ ನಿಷೇಧ : ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಮತದಾನ ದಿನಾಂಕದ 48 ಗಂಟೆಗಳ ಮೊದಲು ಮದ್ಯಪಾನ ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ 6 ತಿಂಗಳ ಸೆರೆವಾಸ / 2,000 ರೂ. ದಂಡನೆ ಅಥವಾ ಅವೆರಡು ಒಳಗೊಂಡಂತೆ ಶಿಕ್ಷೆಗೆ ಒಳಪಡಿಸಲಾಗುವುದು.ಧ್ವನಿವರ್ಧಕಗಳ ಬಳಕೆ : ಮತದಾನದ ಕೊನೆಯ 48 ಗಂಟೆಗಳಲ್ಲಿ ಚುನಾವಣಾ ಪ್ರಚಾರ ಉದ್ದೇಶಕ್ಕಾಗಿ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ.

ಅಂಚೆ ಮತಪತ್ರಗಳ ಮತ ಎಣಿಕೆ : ಮೇ 15ರಂದು ಬೆಳಗ್ಗೆ 8 ಗಂಟೆಯಿಂದ ಇಟಿಪಿಬಿಎಸ್ ಮತ್ತು ಅಂಚೆಯ ಮೂಲಕ ಸ್ವೀಕೃತ ಮತಗಳ ಎಣಿಕೆಯನ್ನು ಚುನಾವಣಾಧಿಕಾರಿಯ ಮೇಜಿನಲ್ಲಿ ನಡೆಸಲಾಗುವುದು. ಈ ಪ್ರಕ್ರಿಯೆ ಮುಗಿದ ನಂತರ ಮತಗಟ್ಟೆಗಳಲ್ಲಿ ಇವಿಎಂನಲ್ಲಿ ದಾಖಲಾದ ಮತಗಳ ಎಣಿಕೆಯನ್ನು ನಡೆಸಲಾಗುತ್ತದೆ. ಮತಗಳ ಎಣಿಕೆ ನಡೆಸುವ ಬಗ್ಗೆ ಅಭ್ಯರ್ಥಿಗಳು ನಿಗದಿಪಡಿಸಿದ 14 ಮತ ಎಣಿಕೆ ಮೇಜಿಗೆ ಮತ್ತು 1 ಚುನಾವಣಾಧಿಕಾರಿಯ ಮೇಜಿಗೆ ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಬಹುದು.

ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ವಾಹನ ಉಪಯೋಗ ಮತ್ತು ಚುನಾವಣಾ ಪ್ರಚಾರಕ್ಕಾಗಿ ವಿವಿಧ ಸ್ಥಳಗಳನ್ನು ಬಳಸುವ ಬಗ್ಗೆ ಅನುಮತಿ ಕೋರಿ 911 ಅರ್ಜಿ ಸ್ವೀಕರಿಸಲಾಗಿದ್ದು, ನಿಯಮಾನುಸಾರ ಪರಿಶೀಲಿಸಿ 895 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ.ಜಿಲ್ಲೆಯಲ್ಲಿ 216 ದೂರುಗಳು ಸ್ವೀಕೃತಗೊಂಡಿದ್ದು, ಆ ಪೈಕಿ 205 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ. ಉಳಿದವು ತನಿಖೆಯ ಹಂತದಲ್ಲಿದೆ. 23 ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದೆ.

ಈವರೆಗೆ 15,89,500 ರೂ. ಅನಧಿಕೃತ ನಗದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಈ ಪೈಕಿ ದಾಖಲೆ ಪರಿಶೀಲಿಸಿ 12,89,500 ರೂ.ವನ್ನು ಮರಳಿಸಲಾಗಿದೆ.ಈವರೆಗೆ 31,763.605 ಲೀ.ಅಕ್ರಮ ಸಂಗ್ರಹ ಮತ್ತು ಮಾರಾಟದ ಮದ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದರ ಅಂದಾಜು ಮೌಲ್ಯ 1,80,95,794 ರೂ. ಆಗಿರುತ್ತದೆ. ಅಲ್ಲದೆ 9 ವಾಹನಗಳನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English