ಮಂಗಳೂರು: ಕಳೆದ ಐದು ವರ್ಷದಲ್ಲಿ ಕೈಗೆತ್ತಿಕೊಂಡ ಕಾಮಗಾರಿಗಳ ಪಟ್ಟಿಯನ್ನು ಈಗಾಗಲೇ ಜನರ ಮುಂದಿಟ್ಟಿದ್ದೇನೆ. ತಾನು ಅಭಿವೃದ್ಧಿ ಕೆಲಸ ಮಾಡಲಿಲ್ಲ ಎನ್ನುವ ಬಿಜೆಪಿಯು ಕೈಗೆತ್ತಿಕೊಂಡ ಕಾಮಗಾರಿಗಳ ಪಟ್ಟಿಯನ್ನು ಜನತೆಯ ಮುಂದಿಡಲಿ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ.ಮೊದೀನ್ ಬಾವಾ ಸವಾಲು ಹಾಕಿದ್ದಾರೆ.
ಸುರತ್ಕಲ್ ನಗರದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಭಾರಿಯ ಚುನಾವಣೆ ಕೈಗೆತ್ತಿಕೊಂಡ ಅಭಿವೃದ್ಧಿಯ ಹಿನ್ನೆಲೆಯಲ್ಲಿ ನಡೆಯಲಿದೆ ಎಂದ ಅವರು, ಸುರತ್ಕಲ್‌ನಲ್ಲಿ ೧೨೬ ಕೋಟಿ ರೂ. ವೆಚ್ಚದಲ್ಲಿ ಮಾರುಕಟ್ಟೆ, ಬೋಂದೆಲ್‌ನಲ್ಲಿ ೭ ಕೋಟಿ ರೂ. ವೆಚ್ಚದಲ್ಲಿ ಪಾಲಿಟೆಕ್ನಿಕ್, ಕಾವೂರು ಪಿಯು ಕಾಲೇಜು ಕಟ್ಟಡ ೧.೮೫ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಅನುದಾನ ಮಂಜೂರಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎ.ಮೊದೀನ್ ಬಾವಾ ಹೇಳಿದರು.
ಕಾಟಿಪಳ್ಳ-ಗಣೇಶಪುರ ಮಾರುಕಟ್ಟೆ ನಿರ್ಮಾಣಕ್ಕೆ ೨ ಕೋಟಿ ರೂ., ಕೃಷ್ಣಾಪುರ ಮಾರುಕಟ್ಟೆ ೧.೦೦ ಕೋಟಿ ರೂ., ಮುಖ್ಯಮಂತ್ರಿ ವಿಶೇಷ ಅನುದಾನ ರಸ್ತೆ ಮತ್ತು ಫುಟ್‌ಪಾತ್ ನಿರ್ಮಾಣ ೬೦ ಕೋಟಿ ರೂ., ಸುರತ್ಕಲ್‌ನ ಒಳಚರಂಡಿ ಕಾಮಗಾರಿ ೫೫.೦೦ ಕೋಟಿ ರೂ., ಸುರತ್ಕಲ್ ಪಾಲಿಕೆ ಕಚೇರಿ ೨.೨೫ ಕೋಟಿ ರೂ., ಅನುದಾನ ಮಂಜೂರಾಗಿದೆ. ಮಾರುಕಟ್ಟೆ, ಪಾಲಿಕೆಯ ಕಟ್ಟಡ ಕಾಮಗಾರಿ ಆರಂಭವಾಗಿದೆ ಶೀಘ್ರದಲ್ಲಿ ಇವುಗಳು ಪೂರ್ಣಗೊಳ್ಳಲಿವೆ ಎಂದರು.
ಸುರತ್ಕಲ್ ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಬೇಕಿದೆ ಹಾಗೂ ಸುರತ್ಕಲ್‌ನಲ್ಲಿ ಈಜುಕೊಳ, ಅಗ್ನಿಶಾಮಕ ದಳ, ನೂತನ ರಂಗ ಮಂದಿರ, ಕ್ರಿಕೆಟ್ ಕ್ರೀಡಾಂಗಣ, ಸುರತ್ಕಲ್ ಕೇಂದ್ರಿತ ಬಸ್ ಸಂಚಾರ, ಮಹಿಳಾ ಕಾಲೇಜು, ಪ್ರತಿಯೊಂದು ಗ್ರಾಮದಲ್ಲೂ ಘನ ತ್ಯಾಜ್ಯ ವಿಲೇ ಘಟಕ ತೆರೆಯಬೇಕಿದೆ. ಈ ನಿಟ್ಟಿನಲ್ಲಿ ಈ ಬಾರಿಯ ನನ್ನ ಕ್ಷೇತ್ರದ ವೈಯುಕ್ತಿಕ ಪ್ರಣಾಳಿಕೆಯಲ್ಲಿದ್ದು ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿ ನನ್ನನ್ನು ವಿಜಯಿಯನ್ನಾಗಿ ಮಾಡಿದಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ ಮಾತನಾಡಿ ಮೊದೀನ್ ಬಾವಾ ಅವರು ಶಾಸಕರಾಗಿ ಆಯ್ಕೆಯಾಗಿ ನಗರ ಪ್ರದೇಶದ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ವೇಗವಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು ನಮ್ಮ ಮುಂದೆ ಇದೆ. ಅನುದಾನವನ್ನು ವಿವಿಧ ಇಲಾಖೆಗಳಿಗೆ ತಾವೇ ಖುದ್ದಾಗಿ ಹೋಗಿ ಬಿಡುಗಡೆಗೊಳಿಸುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದಾರೆ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ನಡೆಸಿ ಉತ್ತರ ಕ್ಷೇತ್ರವನ್ನು ರಾಜ್ಯದ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿರುವ ಇವರನ್ನು ಆರಿಸಿ ವಿದಾನ ಸಭೆಗೆ ಕಳಿಸುವಂತಾಗ ಬೇಕು. ಈಗಾಗಲೇ ಅಭಿವೃದ್ಧಿಯ ಪರ ಇರುವ ಸರ್ವರಿಂದಲೂ ಬಾವಾ ಅವರ ಪರ ಒಲವು ವ್ಯಕ್ತವಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಸುರತ್ಕಲ್ ನಲ್ಲಿ ಮಾರುಕಟ್ಟೆಗಾಗಿ ೫ ಕೋ ರೂ .ಇಟ್ಟು ಬಳಿಕ ಮಾರುಕಟ್ಟೆ ನಿರ್ಮಿಸಲು ವಿಫಲವಾಗಿದ್ದು, ಕೇವಲ ಅಡಿಗಲ್ಲು ಹಾಕಿದ್ದೆ ಸಾಧನೆ. ಇನ್ನು ಕೃಷ್ಣಾಪುರ ರಸ್ತೆ ಚತುಷ್ಪಥ ಮಾಡಲು ಪಕ್ಕದಲ್ಲಿದ್ದ ಅಂಗಡಿಗಳನ್ನು ತೆರವುಗೊಳಿಸಲು ವಿಫಲವಾಗಿತ್ತು. ಸರಿಯಾದ ಜನರಿಗೆ ಬೇಕಾದ ಸುಲಭ ಶೌಚಾಲಯವನ್ನೂ ನಿರ್ಮಿಸಲು ಬಿಜೆಪಿಯಿಂದ ಸಾಧ್ಯವಾಗಲಿಲ್ಲ .
ಆದರೆ ಶಾಸಕ ಮೊದೀನ್ ಬಾವಾ ಅವರ ಅಧಿಕಾರವಧಿಯಲ್ಲಿ ಹೆದ್ದಾರಿ ಬಳಿಯ ಸರ್ವಿಸ್ ರಸ್ತೆಯನ್ನು ಮಾಡಲು ಒತ್ತಡ ಹಾಕುವುದರಿಂದ ಹಿಡಿದು ಉಳಾಯಿ ಬೆಟ್ಟು ವರೆಗೆ ರಸ್ತೆಗಳ ಕಾಂಕ್ರಟೀಕರಣ ಮಾಡಿ ಸಾಧನೆ ಮೆರೆದಿದ್ದಾರೆ. ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದಾರೆ. ಒಂಬೈನೂರಕ್ಕೂ ಮಿಕ್ಕಿ ಬಡ ವರ್ಗಕ್ಕೆ ಆಶ್ರಯ ನಿವಾಸ ಮಂಜೂರಾಗಿದೆ ಎಂದರು. ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ, ಸುರೇಂದ್ರ ಕಾಂಬ್ಲಿ, ಉಪಮೇಯರ್ ಮುಹಮ್ಮದ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English