‘ಮಂಗಳೂರು ದಕ್ಷಿಣ’ದಲ್ಲಿ ಬಿಜೆಪಿ ಜಯಭೇರಿಗೆ ಹಾಗೂ ಕಾಂಗ್ರೆಸ್ ಸೋಲಿಗೆ ಕಾರಣ ಏನು ?

5:53 PM, Thursday, May 17th, 2018
Share
1 Star2 Stars3 Stars4 Stars5 Stars
(No Ratings Yet)
Loading...

Vedavyas
ಮಂಗಳೂರು:  ಮಂಗಳೂರು ದಕ್ಷಿಣ ಕ್ಷೇತ್ರವನ್ನು ಮತ್ತೆ ಬಿಜೆಪಿ ವಶಪಡಿಸಿಕೊಂಡಿದೆ. ಈ ಹಿಂದೆ 2013ರ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ದ ತನ್ನ ಅಸಮಾಧಾನ ಹೊರಹಾಕಿ ಕಾಂಗ್ರೆಸ್ ಅಭ್ಯರ್ಥಿಯನ್ನುಗೆಲ್ಲಿಸಿದ್ದ ಮತದಾರ ಪ್ರಭು ಈ ಬಾರಿ ಮತ್ತೆ ಬಿಜೆಪಿಗೆ ಜೈ ಎಂದಿದ್ದಾನೆ. ಅಭಿವೃದ್ಧಿಯ ಜಪದೊಂದಿಗೆ ಮತ್ತೆ ಜನರ ಮುಂದೆ ಹೋಗಿದ್ದ ಕಾಂಗ್ರೆಸ್ ನ ಕೈ ಹಿಡಿಯಲು ಮತದಾರ ನಿರಾಕರಿಸಿದ್ದಾನೆ.

ಇಲ್ಲಿ ಅತಿಯಾದ ಆತ್ಮ ವಿಶ್ವಾಸವೇ ಕಾಂಗ್ರೆಸಿಗೆ ಮುಳುವಾಯಿತೇ ಎಂದು ವಿಶ್ಲೇಷಿಸಲಾಗುತ್ತಿದೆ. ಅದಲ್ಲದೇ ನಮ್ಮ ಕಾರ್ಪೊರೇಟರ್ ಗಳೇ ಸೋಲಿಗೆ ಕಾರಣರಾದರು ಎನ್ನುವ ಅನುಮಾನಗಳು ಕಾಂಗ್ರೆಸ್ ಮುಖಂಡರಿಗೆ ಕಾಡಲಾರಂಭಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಕ್ತಿ ಕೇಂದ್ರದ ವ್ಯಾಪ್ತಿಯಲ್ಲೇ ಇರುವ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರವನ್ನು ಕಳೆದ ವಿಧಾನಸಭಾ ಚುನಾವಣೆಯ ಉಳಿಸಿಕೊಳ್ಳಲು ಕಮಲ ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಇಲ್ಲಿ ಅಭ್ಯರ್ಥಿ ಘೋಷಣೆಯೇ ಬಿಜೆಪಿ ನಾಯಕರಿಗೆ ಕಗ್ಗಂಟಾಗಿತ್ತು. ಚುನಾವಣೆಯ ಆರಂಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕವಾಗಿರಲಿಲ್ಲ. ಜೊತೆಗೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಗಾಗಿ ಬಿಜೆಪಿಯಲ್ಲೇ ಭಾರೀ ಪೈಪೋಟಿ ನಡೆದಿತ್ತು. ಒಬ್ಬರ ವಿರುದ್ದ ಮತ್ತೊಬ್ಬರು ಕತ್ತಿ ಮಸೆಯುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ತಮ್ಮದೇ ಎನ್ನುವ ಅತಿಯಾದ ಆತ್ಮವಿಶ್ವಾಸ ಹೊಂದಿತ್ತು. ಹೀಗಾಗಿ ರಾಜಕೀಯ ಕಾರ್ಯತಂತ್ರಗಳನ್ನು ರಚಿಸಲು ಗಮನ ಹರಿಸಿರಲಿಲ್ಲ.

ಈ ನಡುವೆ ಬಿಜೆಪಿ ಹೆಣೆದ ರಾಜಕೀಯ ತಂತ್ರಗಾರಿಕೆ ಗ್ರಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿ ಸೋಲೊಪ್ಪಿಕೊಂಡಿದೆ. ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಕಾಂಗ್ರೆಸ್ ಗೆದ್ದವರ ಪಟ್ಟಿ ಹೇಳಿ ಕೇಳಿ ಮಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದ ಕ್ಷೇತ್ರ. ಈ ಕ್ಷೇತ್ರದಿಂದ ಬಿಜೆಪಿಯ ಯೋಗೀಶ್ ಭಟ್ ಸತತ 4 ಬಾರಿ ಗೆಲುವು ಸಾಧಿಸಿದ್ದರು.

ಈ ಬಾರಿ ವೇದವ್ಯಾಸ್ ಕಾಮತ್ ಟಿಕೆಟ್ ಪಡೆಯುತ್ತಿದ್ದಂತೆ ಚಾಣಾಕ್ಷರ ಟೀಮ್ ಕಟ್ಟಿಕೊಂಡು ಪ್ರಚಾರ ಅರಂಭಿಸಿದ್ದರು. ಕಾಂಗ್ರೆಸ್ ತಂತ್ರಗಾರಿಕೆ ಅರಿತು ಪ್ರತಿತಂತ್ರ ಹೆಣೆದಿದ್ದರು. ಕಳೆದ ಬಾರಿ ಬಿಜೆಪಿಯ ಸ್ವಯಂಕೃತ ಅಪರಾಧ ಗಳಿಂದಾಗಿ ಬೇಸತ್ತ ಮತದಾರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಕೈ ಹಿಡಿದಿದ್ದ. ಅದನ್ನೇ ನಂಬಿ ಕೇವಲ ಅಭಿವೃದ್ದಿಯ ಜಪ ಮಾಡಿದ ಕಾಂಗ್ರೆಸ್ ಕ್ಷೇತ್ರವನ್ನು ಕಳೆದು ಕೊಂಡಿದೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರು ಮಾಡಿದ ಪ್ರಚಾರ ಇಲ್ಲಿ ಕಮಲ ಅರಳಲು ಪೂರಕ ವಾತವರಣ ಕಲ್ಪಿಸಿತ್ತು.

ಅಮಿತ್ ಷಾ ರೋಡ್ ಶೋ, ಮೋದಿ ಬಹಿರಂಗ ಪ್ರಚಾರ ಮತ್ತು ಚುನಾವಣಾ ಪೂರ್ವದಲ್ಲಿ ಈ ಕ್ಷೇತ್ರದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರನ್ನು ಕರೆಸಿ ಪ್ರಚಾರ ನಡೆಸಿದ್ದು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಬಲವನ್ನು ಮತ್ತಷ್ಟು ಹೆಚ್ಚಿಸಿತು. ಕಾಂಗ್ರೆಸ್ ನ ಅಭ್ಯರ್ಥಿ ಜೆ.ಆರ್. ಲೋಬೋ ವಿರುದ್ದ ಕೆಲ ಕಾಂಗ್ರೆಸ್ ಮುಖಂಡರೇ ಆಟವಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಮಂಗಳೂರು ಮಾಹಾ ನಗರ ಪಾಲಿಕೆಯ ಕೆಲ ಕಾಂಗ್ರೆಸ್ ಸದಸ್ಯರೇ ಜೆ.ಆರ್. ಲೋಬೋ ವಿರುದ್ದ ತಿರುಗಿ ಬಿದ್ದಿದ್ದರು ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ಅದಲ್ಲದೇ ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಂದರು ಪ್ರದೇಶದ ಅಲ್ಪಸಂಖ್ಯಾತ ಮುಖಂಡರು ಲೋಬೋ ವಿರುದ್ಧ ಮುನಿಸಿಕೊಂಡಿರುವುದನ್ನು ಬಿಜೆಪಿ ಬಳಸಿಕೊಂಡಿತ್ತು. ಒಂದು ಮಾಹಿತಿ ಪ್ರಕಾರ ಬಂದರು ಪ್ರದೇಶದ ಮತಗಳನ್ನು ತಟಸ್ಥವಾಗಿಸುವಲ್ಲಿ ಬಿಜೆಪಿ ಸಫಲವಾಗಿತ್ತು. ಅದಲ್ಲದೇ ಕಾಂಗ್ರೆಸ್ ನ ಪಾಲಿಕೆ ಸದಸ್ಯರು ಬಿಜೆಪಿಯೊಂದಿಗೆ ಗುಟ್ಟಾಗಿ ಕೈ ಜೋಡಿಸಿದ್ದರು ಎಂದು ಹೇಳಲಾಗಿದೆ. ಇವೆಲ್ಲದರ ಮಧ್ಯೆ ಕಾಂಗ್ರೆಸ್ ಬಿಜೆಪಿ ಯಿಂದ ಉಚ್ಚಾಟಿಸಲ್ಪಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಕರ ಪ್ರಭು ಅವರನ್ನು ಬೆಂಬಲಿಸಿ ಕಾಂಗ್ರೆಸ್ ಗೆಲುವಿನ ಕನಸು ಕಂಡಿತ್ತು.

ಶ್ರೀಕರ ಪ್ರಭು ಸರಿ ಸುಮಾರು 10 ಸಾವಿರ ಬಿಜೆಪಿ ಮತಗಳನ್ನು ಪಡೆಯುತ್ತಾರೆ ಎಂದು ಕಾಂಗ್ರೆಸ್ ನಂಬಿತ್ತು. ಅದರೆ ಶ್ರೀಕರ ಪ್ರಭು ಆಟ ನಡೆಯಲಿಲ್ಲ. ಪ್ರಭು ಪಡೆದಿದ್ದು ಕೇವಲ 861 ಮತ. ಇದೇ ಸಂದರ್ಭದಲ್ಲಿ ಬಿಜೆಪಿ ಕಾಂಗ್ರೆಸ್ ಪಾಳಯದಲ್ಲೇ ತಂತ್ರಗಾರಿಕೆ ಹೆಣೆದಿದ್ದು ಕೈ ಪಕ್ಷಕ್ಕೆ ಗೊತ್ತೇ ಆಗಲಿಲ್ಲ. ಈಗ ಕಾಲ ಮಿಂಚಿ ಹೋಗಿದೆ. ಇನ್ನು ಕಾಂಗ್ರೆಸ್ ಗೆ ಉಳಿದಿರುವುದು ಕೇವಲ ಸೋಲಿಗೆ ಉತ್ತರ ಹುಡುಕುವ ವಿಮರ್ಶೆ ಮಾತ್ರ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English