ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಮೆಡಿಕಲ್ ಫಿಸಿಕ್ಸ್’ ನೂತನ ಕೋರ್ಸ್ ಉದ್ಘಾಟನೆ ಸಮಾರಂಭವು ಶುಕ್ರವಾರ ವಿವಿಯ ಸಭಾಂಗಣದಲ್ಲಿ ನಡೆಯಿತು.
ನೂತನ ಕೋರ್ಸ್‌ನ ಉದ್ಘಾಟನೆಯನ್ನು ಭಾರತ ಸರಕಾರದ ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಮಂಡಲಿಯ ಅಧ್ಯಕ್ಷ ಎಸ್.ಎ.ಭಾರದ್ವಾಜ್ ಅವರು ನೆರವೇರಿಸಿ ಮಾತನಾಡಿ, ದೇಶದ 22 ವಿಶ್ವವಿದ್ಯಾಲಯಗಳು ತಮ್ಮ ವ್ಯಾಪ್ತಿಯಲ್ಲಿ ವಿಕಿರಣ ವಿಜ್ಞಾನದಲ್ಲಿ ಸ್ನಾತಕಕೋತ್ತರ ಎಂ.ಎಸ್ಸಿ ಕೋರ್ಸ್‌ಗಳನ್ನು ನಡೆಸುತ್ತಿವೆ. ಮೂರು ವರ್ಷದ ಅವಧಿಯ ಈ ಕೋರ್ಸ್ ಅಂತಿಮ ವರ್ಷದಲ್ಲಿ ಒಂದು ವರ್ಷದ ಇಂಟರ್ನ್‌ಶಿಪ್ ಒಳಗೊಂಡಿದೆ. ನೂತನ ಕೋರ್ಸ್ ಯುವ ಜನತೆಯ ಉತ್ತಮ ಭವಿಷ್ಯಕ್ಕೆ ಸಹಕಾರಿಯಾಗಲಿದೆ ಎಂದರು.
ಭಾರತದಲ್ಲಿ ಪ್ರಸ್ತುತ 450 ರೇಡಿಯೋ ಥೆರಪಿ ಕೇಂದ್ರಗಳಿವೆ ಮತ್ತು ಭಾರತ ಸರಕಾರದ ಅಟೋಮಿಕ್ ಎನರ್ಜಿ ರೆಗ್ಯುಲೇಟರಿ ಮಂಡಲಿಯಲ್ಲಿ 1,600 ರೇಡಿಯೋ ಥೆರಪಿಸ್ಟ್‌ಗು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಲ್ಪಾಕಂನ ನ್ಯೂಕ್ಲಿಯರ್ ಎನರ್ಜಿ ಸೇಫ್ಟಿ ಅನಾಲಿಸಿಸ್‌ನ ವಿ.ಬಾಲಸುಬ್ರಹ್ಮಣ್ಯಂ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ವಿಕಿರಣ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆಗೆ ವಿಪುಲವಾದ ಅವಕಾಶಗಳಿವೆ. ಈ ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಲು ಸಂಸ್ಥೆಯು ವಿವಿಧ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಮಾತನಾಡಿ, ಕರ್ನಾಟಕದಲ್ಲಿ ಬೇರೆ ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಈ ಕೋರ್ಸ್ ಇರುವುದಿಲ್ಲ. ಕೋರ್ಸ್‌ನ ಅನನ್ಯತೆ ಕಂಡುಕೊಂಡು ಯುವಜನತೆಗೆ ಅನುಕೂಲವಾಗಲಿ ಎಂಬ ದಿಸೆಯಿಂದ ಹೊಸ ಕೋರ್ಸ್ ಆರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಬಿ.ಎಸ್.ನಾಗೇಂದ್ರ ಪ್ರಕಾಶ್ ಸ್ವಾಗತಿಸಿದರು. ಕೋರ್ಸ್‌ನ ಸಂಯೋಜಕ ಪ್ರೊ.ಸೋಮಶೇಖರಪ್ಪ ಉಪಸ್ಥಿತರಿದ್ದರು. ಪ್ರೊ.ಕರುಣಾಕರ ವಂದಿಸಿದರು.
Click this button or press Ctrl+G to toggle between Kannada and English