ಬೆಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಬ್ಯಾಂಕಿನಲ್ಲಿರುವ ರೈತರ 51 ಸಾವಿರ ಕೋಟಿ ಮತ್ತು ಸ್ತ್ರೀಶಕ್ತಿ ಸಂಘದ 4,300 ಕೋಟಿ ರೂ. ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದ ನಿಯೋಜಿತ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಈಗ ದೊಡ್ಡ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹೆಚ್‌ಡಿಕೆ ಅಧಿಕಾರಕ್ಕೆ ಬರುವ ಮೊದಲು ಹೇಳಿಕೊಂಡಿದ್ದ ಮಾತು ಇದೀಗ ಆಚರಣೆಗೆ ತೆರಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ. ಮಿತ್ರಪಕ್ಷವಾದ ಕಾಂಗ್ರೆಸ್‌ಅನ್ನು ಮೊದಲ ವಿಚಾರದಲ್ಲಿಯೇ ಎದುರು ಹಾಕಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಸಾಲ ಮನ್ನಾ ಘೋಷಣೆ ಕುಮಾರಸ್ವಾಮಿ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದೆಯೇ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ಸದ್ಯ ರಾಜ್ಯದ ಪ್ರತಿಯೊಬ್ಬ ಪ್ರಜೆಯ ಮೇಲೆ 38 ಸಾವಿರ ರೂ. ಸಾಲ ಇದೆ. ಈ ಹಿಂದಿನ ರಾಜ್ಯ ಸರ್ಕಾರಗಳು ಅಷ್ಟು ದೊಡ್ಡ ಹೊರೆ ಹೊರಿಸಿಟ್ಟಿವೆ. ಸದ್ಯ ಕುಮಾರಸ್ವಾಮಿ ನೀಡುವ ಭರವಸೆ ಈಡೇರಿಸಲು ಮುಂದಾದರೆ ಮತ್ತಷ್ಟು ಸಾಲದ ಹೊರೆ ರಾಜ್ಯದ ನಾಗರಿಕರ ಮೇಲೆ ಬೀಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಳೆದ 4 ವರ್ಷಗಳಲ್ಲಿ 90 ಸಾವಿರ ಕೋಟಿ ರೂ. ಸಾಲ ಮಾಡಿದೆ. 2012–13ರಲ್ಲಿ ರಾಜ್ಯ ಸರ್ಕಾರದ ಒಟ್ಟು ಹೊಣೆಗಾರಿಕೆ ಮೊತ್ತ 1,18,155 ಕೋಟಿ ರೂ.ನಷ್ಟಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸಿದ 5 ನೇ ಬಜೆಟ್‌ನ ಹೊತ್ತಿಗೆ ಈ ಮೊತ್ತ 2,08,557 ಕೋಟಿ ರೂ. ದಾಟಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಲದ ಮೊತ್ತ ಪ್ರತಿ ವರ್ಷ ಸರಿಸುಮಾರು 12 ಸಾವಿರ ಕೋಟಿ ರೂ.ಗಳಷ್ಟು ಏರಿಕೆಯಾಗುತ್ತಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಪ್ರತಿ ವರ್ಷ ಸಾಲ ಪಡೆಯುತ್ತಿರುವ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿರುವುದು ಅಂಕಿ ಅಂಶ ಬಹಿರಂಗ ಪಡಿಸಿದೆ.
ಮೊದಲ ವರ್ಷ 20 ಸಾವಿರ ಕೋಟಿ ರೂ., ಎರಡನೇ ವರ್ಷ 21 ಸಾವಿರ ಕೋಟಿ ರೂ., ಮೂರನೇ ವರ್ಷ 21 ಸಾವಿರ ಕೋಟಿ ರೂ. ಹಾಗೂ ನಾಲ್ಕನೇ ವರ್ಷ 28 ಸಾವಿರ ಕೋಟಿ ರೂ. ಮೊತ್ತವನ್ನು ವಿವಿಧ ಮೂಲಗಳಿಂದ ಸಾಲ ಪಡೆಯಲಾಗಿತ್ತು. ಸಾಲದ ಎತ್ತುವಳಿ ಹೊಣೆಗಾರಿಕೆ ಮೊತ್ತ 2006ರಿಂದ 2012ರ ಅವಧಿಯಲ್ಲಿ ದುಪ್ಪಟ್ಟಾಗಿದೆ. ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಅವಧಿ (2005–06) ರಾಜ್ಯದ ಒಟ್ಟು ಹೊಣೆಗಾರಿಕೆ ಮೊತ್ತ 56,027 ಕೋಟಿ ರೂ.ನಷ್ಟಿತ್ತು. 2007ರಲ್ಲಿ ರಾಜ್ಯದ ಸಾಲ 63,844 ಕೋಟಿ ರೂ.ಗೆ ತಲುಪಿತ್ತು. ಈಗ 2,08,557 ಕೋಟಿ ರೂ.ಗೆ ತಲುಪಿದ್ದರಿಂದಾಗಿ ಸಾಲದ ಮೊತ್ತ ಕಳೆದ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳವಾದಂತಾಗಿದೆ.
ರಾಜ್ಯ ಸರ್ಕಾರದ ಸಾಲದ ಮೊತ್ತ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ 2.50 ಲಕ್ಷ ಕೋಟಿ ರೂ. ದಾಟುವ ಆತಂಕ ಕಾಣಿಸಿಕೊಂಡಿದೆ. 2017-18ನೇ ಸಾಲಿನಲ್ಲಿ 1,86,561 ಕೋಟಿ ರೂ.ನ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನು ಕಾರ್ಯರೂಪಕ್ಕೆ ತರಲು 1,44,892 ಕೋಟಿ ರೂ. ರಾಜಸ್ವ ಜಮೆಗಳ ಜತೆಗೆ 37,092 ಕೋಟಿ ರೂ. ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ಇದರಿಂದಾಗಿ ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ. ತಲುಪಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆದಾಯ ಸಂಗ್ರಹದಲ್ಲಿ ಕುಸಿತ ಮತ್ತು ವೆಚ್ಚ ಹೆಚ್ಚಳದಿಂದಾಗಿ ಸಾಲದ ಪ್ರಮಾಣ ಈ ವರ್ಷ 45 ಸಾವಿರ ಕೋಟಿ ರೂ. ದಾಟುವ ಆತಂಕ ಕಾಣಿಸಿಕೊಂಡಿದೆ.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷ ಸತತ ಬರಗಾಲ ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‌ಗಳ ಮೂಲಕ ರೈತರು ಮಾಡಿದ್ದ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು, ಇದರಿಂದ ಬೊಕ್ಕಸದ ಮೇಲೆ 8165 ಕೋಟಿ ರೂ. ಹೆಚ್ಚುವರಿ ಹೊರೆ ಬಿದ್ದಿದೆ. ಬಜೆಟ್‌ನಲ್ಲಿ ಇದಕ್ಕೆ ಅನುದಾನ ನಿಗದಿಪಡಿಸದ ಕಾರಣ ಈ ಮೊತ್ತವನ್ನು ಹೆಚ್ಚುವರಿಯಾಗಿ ಭರಿಸಬೇಕು. ಈಗಾಗಲೇ ಪೂರಕ ಬಜೆಟ್‌ನಲ್ಲಿ 2,999 ಕೋಟಿ ರೂ. ಒದಗಿಸಿದ್ದು, ಇನ್ನೂ 5,166 ಕೋಟಿ ರೂ. ನೀಡಬೇಕು.
ಈಗಾಗಲೇ ಸರ್ಕಾರದ ಮೇಲೆ 2.05 ಲಕ್ಷ ಕೋಟಿ ಸಾಲವಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 37,092 ಸಾವಿರ ಕೋಟಿ ಸಾಲ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಆಗ ವರ್ಷಾಂತ್ಯಕ್ಕೆ ಸಾಲದ ಮೊತ್ತ 2,42,420 ಕೋಟಿ ರೂ. ತಲುಪಲಿದೆ ಎಂಬ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಈಗ ಆಗಿರುವ ಮತ್ತು ಮುಂದೆ ಆಗಲಿರುವ ಹೆಚ್ಚುವರಿ ವೆಚ್ಚ ಹೊಂದಾಣಿಕೆ ಮಾಡಲು ಇತರೆ ಇಲಾಖೆಗಳಿಗೆ ನೀಡಿರುವ ಅನುದಾನ ಕಡಿತಗೊಳಿಸಬೇಕಾಗುತ್ತದೆ. ಶೀಘ್ರದಲ್ಲೇ ಚುನಾವಣೆ ಬರುತ್ತಿರುವುದರಿಂದ ಅನುದಾನ ಕಡಿತಗೊಳಿಸಿದರೆ ರಾಜಕೀಯವಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಹೆಚ್ಚುವರಿ ಸಾಲ ಪಡೆದೇ ಯೋಜನೆಗಳಿಗೆ ಹಣ ಒದಗಿಸಬೇಕು. ಇದರಿಂದ ಸಾಲದ ಮೊತ್ತ 2.5 ಲಕ್ಷ ರೂ. ಮೀರಬಹುದು ಎಂದು ಹೇಳಲಾಗಿದೆ.
ಇನ್ನೊಂದೆಡೆ ಸರ್ಕಾರಿ ನೌಕರರ ವೇತನಕ್ಕೆ ಸಂಬಂಧಿಸಿದಂತೆ ಆರನೇ ವೇತನ ಆಯೋಗ ತನ್ನ ವರದಿ ನೀಡಲಿದೆ. ಈ ವರದಿಯಂತೆ ವೇತನ ಹೆಚ್ಚಳವನ್ನು ಪೂರ್ವಾನ್ವಯವಾಗುವಂತೆ ಜಾರಿಗೊಳಿಸಿದರೆ ಆಗಲೂ ಕೋಟ್ಯಂತರ ರೂ. ಹೆಚ್ಚುವರಿ ಹೊರೆ ಬೀಳುತ್ತದೆ. ಇದೆಲ್ಲಾ ಗಮನಿಸಿದರೆ ಕುಮಾರಸ್ವಾಮಿ ಮುಂದೆ ಸಾಲ ಮನ್ನಾ ಭರವಸೆ ಬೆಟ್ಟದಷ್ಟು ದೊಡ್ಡ ಸವಾಲಾಗಿ ಕಾಡಲಿದೆ ಎಂಬುದರಲ್ಲಿ ಸಂಶಯವಿಲ್ಲ.
Click this button or press Ctrl+G to toggle between Kannada and English