ಮಂಗಳೂರು: ಕೇರಳದಲ್ಲಿ ಹತ್ತು ಮಂದಿಯನ್ನು ಬಲಿ ಪಡೆದಿರುವ ಮಾರಕ ನಿಫಾ ವೈರಸ್‌ನ್ನು ಅತ್ಯಂತ ಕ್ಷಿಪ್ರವಾಗಿ ಪತ್ತೆ ಹಚ್ಚಿದ್ದು ಉಡುಪಿಯ ಮಣಿಪಾಲದ ವೈದ್ಯರು. ಅಪರೂಪದ ಈ ಕಾಯಿಲೆ ಬಗ್ಗೆ ಮಾಹಿತಿ ಬಂದ ಕೇವಲ ಹತ್ತೇ ತಾಸಿನಲ್ಲಿ ಮಣಿಪಾಲದ ವೈದ್ಯರ ತಂಡ ಈ ಕಾಯಿಲೆಯನ್ನು ಗುರುತಿಸುವಲ್ಲಿ ಯಶ ಕಂಡಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ನಿಫಾ ವೈರಸ್ ಕರ್ನಾಟಕ ಕರಾವಳಿಗೂ ಹಬ್ಬುವುದನ್ನು ತಡೆಯಲು ಸಾಧ್ಯವಾಗಿದೆ. ಮಣಿಪಾಲ್ ಸೆಂಟರ್ ಫಾರ್ ವೈರಸ್ ರೀಸರ್ಚ್‌ನ ಡಾ. ಅರುಣ್ ಕುಮಾರ್ ಈ ಕಾಯಿಲೆ ಚಿಕಿತ್ಸೆಯ ನೇತೃತ್ವ ವಹಿಸಿದ್ದಾರೆ. ಗಮನಾರ್ಹ ಸಂಗತಿ ಅಂದ್ರೆ ನಿಫಾದಂತಹ ವೈರಸ್ ರೋಗಗಳನ್ನು ಪತ್ತೆ ಹಚ್ಚಲು ಬೇಕಾದ ಪ್ರಯೋಗಾಲಯ ಮಣಿಪಾಲದ ಕೆಎಂಸಿ ಬಿಟ್ಟರೆ ಪುಣೆಯಲ್ಲಿ ಮಾತ್ರ ಇದೆ.
ಹೀಗಾಗಿ ಮಣಿಪಾಲಕ್ಕೆ ಬಂದ ಸ್ಯಾಂಪಲ್‌ನ್ನು ಅತ್ಯಂತ ಕ್ಷಿಪ್ರವಾಗಿ ಪತ್ತೆ ಹಚ್ಚಲು ಸಾಧ್ಯವಾಯಿತು. ಮೇ 18 ರಂದು ಮೊದಲ ಬಾರಿಗೆ ಮಣಿಪಾಲದ ವೈದ್ಯರ ತಂಡ ಈ ಕಾಯಿಲೆಯನ್ನು ಪತ್ತೆ ಹಚ್ಚಿತ್ತು. ಇದೀಗ ನಿಫಾ ಮಂಗಳೂರಿನ ಇಬ್ಬರಿಗೂ ತಗುಲಿರುವ ಶಂಕೆ ಇದ್ದು, ಈ ಇಬ್ಬರ ಗಂಟಲು ದ್ರವ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಮಣಿಪಾಲದ ಕೆಎಂಸಿಗೆ ಕಳಿಸಿಕೊಡಲಾಗಿದೆ. ಮಣಿಪಾಲದಲ್ಲಿ ಸುಸಜ್ಜಿತ ಲ್ಯಾಬ್ ಇರುವ ಕಾರಣದಿಂದ ಕೇರಳ ಗಡಿಯಲ್ಲಿರುವ ಕರಾವಳಿ ಕರ್ನಾಟಕದ ಜನ ಹೆಚ್ಚು ಆತಂಕ ಪಡುವ ಅಗತ್ಯ ಇಲ್ಲ.
Click this button or press Ctrl+G to toggle between Kannada and English