ನಿಪಾಹ್ ವೈರಸ್ ಭೀತಿ ಹಿನ್ನೆಲೆ, ಕರಾವಳಿಯಲ್ಲಿ ಭಾರೀ ಕಟ್ಟೆಚ್ಚರ..!

4:26 PM, Wednesday, May 23rd, 2018
Share
1 Star2 Stars3 Stars4 Stars5 Stars
(No Ratings Yet)
Loading...

nipah-virusಮಂಗಳೂರು: ಕೇರಳದಲ್ಲಿ 10ಕ್ಕೂ ಹೆಚ್ಚು ಜನರನ್ನು ಬಲಿ ಪಡೆದುಕೊಂಡಿರುವ ನಿಪಾಹ್ ವೈರಸ್ ಆತಂಕ ಕರಾವಳಿ ಜಿಲ್ಲೆಗಳನ್ನೂ ಆವರಿಸಿದೆ. ಪಕ್ಕದ ಕೇರಳದಿಂದ ನಿಪಾಹ್ ವೈರಸ್ ಸೋಂಕು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಈ ನಡುವೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕೇರಳ ಮೂಲದ ಇಬ್ಬರು ರೋಗಿಗಳಿಗೆ ನಿಪಾಹ್ ವೈರಸ್ ಸೋಂಕು ತಗಲಿರುವ ಶಂಕೆಯ ಮೇರೆಗೆ ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ನಿಪಾಹ್ ಸೋಂಕು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಎಲ್ಲಾ ವೈದ್ಯರು, ಆಶಾ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕರ ಪತ್ರಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಕೇರಳದಿಂದ ಬಂದವರಲ್ಲಿ ಅಥವಾ ಇತರರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.

ಕೇರಳ ಗಡಿ ಭಾಗ ಮಂಗಳೂರಿನಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು ನಿಪಾಹ್ ವೈರಸ್ ಶಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ವೆನ್ಲಾಕ್ ಆಸ್ಪತ್ರೆಯ ತಳ ಅಂತಸ್ತಿನಲ್ಲಿ ಸದ್ಯ 5 ಬೆಡ್ ಗಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ.

ಮಂಗಳೂರಿಗರು ಕೇರಳದ ಹಲವು ಭಾಗದೊಂದಿಗೆ ಸಾಂಸ್ಕೃತಿಕ , ವ್ಯವಹಾರಿಕ ಹಾಗೂ ಭಾವನಾತ್ಮಕ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ನಿಪಾಹ್ ವೈರಸ್ ಹರಡಿರುವ ಕೇರಳದ ಪ್ರದೇಶಗಳಿಗೆ ಪ್ರಯಾಣ ಬೆಳೆಸದಂತೆ ಜನರಿಗೆ ಮಾಹಿತಿ ರವಾನಿಸಲಾಗಿದೆ.

ಮರದಿಂದ ಬಿದ್ದ ಹಣ್ಣು ಹಂಪಲುಗಳನ್ನು ಹಾಗು ರೋಗ ಕಂಡು ಬಂದ ಮತ್ತು ಶಂಕಿತ ಪ್ರದೇಶದ ತಾಳೆ ಮತ್ತು ತೆಂಗಿನ ಮರಗಳ ಸೇಂದಿ ಸೇವಿಸದಂತೆ ಸೂಚನೆ ನೀಡಲಾಗಿದೆ.

ಉಡುಪಿ ಜಿಲ್ಲೆಯಲ್ಲೂ ನಿಪಾಹ್ ವೈರಸ್ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲಿ ಬರುವ ಸಂಶಯಾಸ್ಪದ ನಿಪಾಹ್ ವೈರಸ್ ರೋಗಿಗಳ ವಿವರಗಳನ್ನು ಕೂಡಲೇ ಆರೋಗ್ಯ ಇಲಾಖೆಗೆ ನೀಡುವಂತೆ ಸೂಚನೆ ರವಾನಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English