ಮಂಗಳೂರು: ನಿಪಾಹ್ ವೈರಸ್ ರಾಜ್ಯಕ್ಕೂ ಹರಡಿರುವ ಭೀತಿ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿಯೂ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಿಂದ ವೈರಸ್ ಹರಡುವ ಭೀತಿ ಈಗ ಹಣ್ಣು ವ್ಯಾಪಾರದ ಮೇಲೂ ಪ್ರಭಾವ ಬೀರಿದೆ.
ನಿಪಾಹ್ ವೈರಸ್ ಎಫೆಕ್ಟ್ ನಿಂದಾಗಿ ಮಂಗಳೂರಿನಲ್ಲಿ ಹಣ್ಣು ಮಾರಾಟ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ.
ರಂಜಾನ್ ತಿಂಗಳ ಉಪವಾಸ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಕರಾವಳಿಯಲ್ಲಿ ಮುಸ್ಲಿಂ ಬಾಂಧವರು ಉಪವಾಸ ಬಿಡುವ ವೇಳೆ ಹೆಚ್ಚಾಗಿ ಹಣ್ಣುಗಳನ್ನು ಸೇವಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಣ್ಣಿನ ವ್ಯಾಪಾರ ತೀವ್ರ ಏರಿಕೆ ಯಾಗಿತ್ತು.
ಆದರೆ ನಿಪಾಹ್ ವೈರಸ್ ವ್ಯಾಪಿಸಿರುವ ಭೀತಿ ಈಗ ಹಣ್ಣಿನ ವ್ಯಾಪಾರದ ಮೇಲೆ ಬಿದ್ದಿದೆ. ಕಳೆದ ಮೂರು ದಿನಗಳಿಂದ ಮಂಗಳೂರು ಹಣ್ಣಿನ ಮಾರುಕಟ್ಟೆಯಲ್ಲಿ ವ್ಯಾಪಾರ ಧಿಡೀರ್ ಕುಸಿತ ಕಂಡಿದೆ. ಇದು ಹಣ್ಣಿನ ವ್ಯಾಪಾರಿಗಳಲ್ಲಿ ಭಾರೀ ನಿರಾಶೆ ಮೂಡಿಸಿದೆ.
ನಿಪಾಹ್ ವೈರಸ್ ಕುರಿತು ಮಂಗಳೂರಿಗರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಹಕ್ಕಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬಾರದೆಂಬ ಸೂಚನೆಯನ್ನು ಆರೋಗ್ಯ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಜನರು ಹಣ್ಣು ಖರೀದಿಗೆ ಹಿಂದೆಟು ಹಾಕುತ್ತಿದ್ದಾರೆ .
ಮಂಗಳೂರಿಗೆ ಬರುವ ಕೆಲ ಹಣ್ಣುಗಳು ಕೇರಳದಿಂದ ಬರುತ್ತಿರುವ ಕಾರಣ ಜನರು ಹಣ್ಣುಗಳ ಖರೀದಿಯ ಗೋಜಿಗೂ ಹೋಗುತ್ತಿಲ್ಲ.
ಹಣ್ಣುಗಳು ಮಾತ್ರವಲ್ಲದೇ ಮಾಂಸ ವ್ಯಾಪಾರದ ಮೇಲೂ ನಿಪಾಹ್ ವೈರಸ್ ಪರಿಣಾಮ ಬೀರಿದೆ. ನಿಪಾಹ್ ವೈರಸ್ ಪ್ರಾಣಿಗಳ ಮೂಲಕವೂ ಹರಡುತ್ತದೆ ಎನ್ನುವ ಕಾರಣ ಜನರು ಕೋಳಿ, ಕುರಿ, ಹಂದಿ ಮಾಂಸ ಖರೀದಿಗೂ ಮುಂದಾಗುತ್ತಿಲ್ಲ. ಈ ಕಾರಣ ವ್ಯಾಪಾರಿಗಳು ಭಾರೀ ನಷ್ಟ ಅನುಭವಿಸುತ್ತಿದ್ದಾರೆ.
Click this button or press Ctrl+G to toggle between Kannada and English