ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಧಿಕಾರ ರಚನೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗುತ್ತದೆ. ಇದರ ಪರವಾಗಿ ದನಿ ಎತ್ತಿದ ನಟ ರಜನೀಕಾಂತ್ ಅವರ ಚಲನಚಿತ್ರಗಳನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಪ್ರದರ್ಶನಕ್ಕೆ ಅವಕಾಶ ಕೊಡಬಾರದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದಲ್ಲೇ ಅವರ ಚಿತ್ರವೊಂದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದ್ದು, ಅದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಅತ್ಯಂತ ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಭಾಗಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಹಾಗೂ ಆ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಹೈದರಾಬಾದ್-ಕರ್ನಾಟಕ ತೀವ್ರವಾಗಿ ಹಿಂದುಳಿದಿದೆ. ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕಲಂ371 ಸಮರ್ಪಕವಾಗಿ ಜಾರಿಯಾಗಿಲ್ಲ. ಹೈದರಾಬಾದ್ –ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ತಲಾ ಒಂದೊಂದು ಡಿಸಿಎಂ ಹುದ್ದೆ ನೀಡಿ ಅಭಿವೃದ್ಧಿಗೆ ಸರ್ಕಾರ ಸಹಕರಿಸಬೇಕು ಎಂದು ಹೇಳಿದರು.
ಏಕೀಕರಣಗೊಂಡು ಇದುವರೆಗೂ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಅದಕ್ಕಾಗಿ ಶ್ವೇತಪತ್ರ ಹೊರಡಿಸಿ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದು ಹೇಳಿದ ಅವರು, ಇದಕ್ಕಾಗಿ ಆಗ್ರಹಿಸಿ ಕೆಂಪೇಗೌಡ ಪ್ರತಿಮೆ ಬಳಿ ನಾಳೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಚಾಮರಾಜನಗರ ವಿಧಾನಸಭಾ ಚುನಾವಣೆಯಲ್ಲಿ ಇವಿಎಂಗಳ ದೋಷದಿಂದ ನನಗೆ ಸೋಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ. ಮುಂಬರುವ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸುವಂತೆ ಒತ್ತಾಯಿಸಿದರು.
ಮಕ್ಕಳ ಕಳ್ಳರ ವದಂತಿಯಿಂದ ಅಮಾಯಕರ ಮೇಲೆ ರಾಜ್ಯದೆಲ್ಲೆಡೆ ನಿರಂತರ ಹಲ್ಲೆ ನಡೆಯುತ್ತಿದೆ. ಉದ್ಯೋಗ ಅರಿಸಿ ಬಂದ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಕೊಂದು ಹಾಕಲಾಗಿದೆ. ಇದು ತಲೆ ತಗ್ಗಿಸುವಂತಹ ವಿಷಯ. ಈ ಸಂಬಂಧ ಅಗತ್ಯ ಜಾಗೃತಿ ಮೂಡಿಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಂಗಳೂರನಲ್ಲಿ ವದಂತಿಗೆ ಬಲಿಯಾದ ಕಾಲುರಾಂ ಎಂಬುವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
Click this button or press Ctrl+G to toggle between Kannada and English