ಮಂಗಳೂರು: ಕೇರಳಕ್ಕೆ ಮುಂಗಾರು ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಂಜಾನೆಯಿಂದ ಮಂಗಳೂರಿನಲ್ಲಿ ಭಾರಿ ಮಳೆ ಸುರಿಯುತ್ತಿದೆ. ಎರಡು ದಿನಗಳಿಂದ ರಾತ್ರಿ ಮಳೆ ಸುರಿಯುತ್ತಿತ್ತು. ಅದರೆ ಮಂಗಳವಾರ ಬೆಳಗ್ಗೆಯಿಂದಲೇ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದೆ. ಇಂದು ಅತಿ ಹೆಚ್ಚು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದ್ದು, ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಸುರಿಯುತ್ತಿದೆ.
ಹವಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಕರಾವಳಿಯಲ್ಲಿ ಜೂನ್ 2ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.ಈ ಮಧ್ಯೆ ಸೋಮವಾರ ರಾತ್ರಿ ಜಿಲ್ಲೆಯಲ್ಲಿ ಸುರಿದ ಗುಡುಗು- ಸಿಡಿಲು ಸಹಿತ ಮಳೆಗೆ ಹಲವು ಮನೆಗಳು ಹಾನಿಗೀಡಾಗಿವೆ. ಕಳೆದ ರಾತ್ರಿ ಸಿಡಿಲಿನ ಆಘಾತಕ್ಕೆ ಮಗು ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನ ದೇರೇಬೈಲ್ ಸಮೀಪದ ಬೋರುಗುಡ್ಡೆ ಎಂಬಲ್ಲಿ ಸಿಡಿಲು ಬಡಿದು, ಎರಡೂವರೆ ವರ್ಷದ ಮಗು ಸಾವನ್ನಪ್ಪಿದೆ. ಮಂಗಳೂರಿನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಉತ್ತರ ಕರ್ನಾಟಕದ ಹನುಮಂತ ಕೆ. ಎಂಬುವರ ಮೃತ ಮಗು ಎಂದು ಗುರುತಿಸಲಾಗಿದೆ. ನೆಲ್ಯಾಡಿ ಗ್ರಾಮದ ಪಡುಬೆಟ್ಟು ಸಮೀಪದ ಸರೋಳಿಕೆರೆ ಎಂಬಲ್ಲಿ ಸಿಡಿಲು ಬಡಿದು ಪ್ರವೀಣ್ ಪೀಟರ್ ಡಿಸೋಜಾ ಎಂಬವರು ಮೃತಪಟ್ಟಿದ್ದಾರೆ. ಗಾರೆ ಕೆಲಸಗಾರನಾಗಿದ್ದ ಪ್ರವೀಣ್ ಪೀಟರ್ ರಾತ್ರಿ ಊಟ ಮುಗಿಸಿ ಹಾಲ್ ನಲ್ಲಿ ಕಿಟಕಿ ಪಕ್ಕ ಕುರ್ಚಿಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದಿತ್ತು.
ಈ ವೇಳೆ ಪ್ರವೀಣ್ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ. ಉಡುಪಿಯಲ್ಲಿಯೂ ವರ್ಷಧಾರೆ ಮುಂದುವರಿದಿದೆ. ಉಡುಪಿ ಸುತ್ತಮುತ್ತ ಸೋಮವಾರ ತಡರಾತ್ರಿ ಗಾಳಿ ಸಹಿತ ಭಾರೀ ಮಳೆಯಾಗಿದೆ. ಭಾರೀ ಮಳೆಗೆ ಮರಗಳು ಧರೆಗುರುಳಿದ್ದು, ವಿದ್ಯುತ್ ಪೂರೈಕೆ ವ್ಯತ್ಯಯವಾಗಿದೆ.
Click this button or press Ctrl+G to toggle between Kannada and English