ಬೆಂಗಳೂರು: ನಾಡಿನ ಜನತೆಗೆ ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡುವ ವಿಷಯದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಕಾಂಗ್ರೆಸ್ ಹಾಗೂ ನಮ್ಮ ನೇತೃತ್ವದ ಸಹಭಾಗಿತ್ವದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಬೆಂಗಳೂರಿನಲ್ಲಿ ರೈತ ನಾಯಕರು ಹಾಗೂ ಪ್ರತಿಪಕ್ಷಗಳ ಸಭೆ ಕರೆದು ಸಾಲ ಮನ್ನಾ ಕುರಿತು ಚರ್ಚಿಸುತ್ತಿದ್ದು, ಸಭೆ ಉದ್ದೇಶಿಸಿ ಸಿಎಂ ಮಾತನಾಡುತ್ತಿದ್ದಾರೆ.
ರೈತರ ಸಾಲಮನ್ನಾ ಮಾಡುತ್ತೋ ಇಲ್ಲವೋ ಎಂಬ ಗೊಂದಲವಿತ್ತು. ಈ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದ್ದು, ಸರ್ಕಾರ ನಾಡಿನ ಜನರ ಹಿತ ಕಾಪಾಡುತ್ತೆ ಎಂದು ಅಭಯ ನೀಡಿದರು. ರೈತರನ್ನು ಉಳಿಸುತ್ತೇನೆ. ರಾಜ್ಯದ ಖಜಾನೆಯೂ ಉಳಿಯುತ್ತೆ ಎಂಬ ಭರವಸೆ ನೀಡಿದರು.
ರಾಜ್ಯದಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಚೀಫ್ ಸೆಕ್ರೇಟರಿಗೆ ವರದಿ ತರಲು ಹೇಳಿದ್ದೇನೆ. ಹಂತ ಹಂತವಾಗಿ ರೈತರ ಉಳಿವಿಗೆ ಕೆಲಸ ಮಾಡುತ್ತೇನೆ. 6.5 ಕೋಟಿ ಜನರ ಕಲ್ಯಾಣಕ್ಕೆ ಬದ್ಧವಾಗಿದ್ದೇನೆ.
ಈಗಾಗಲೇ ಅಧಿಕಾರಿಗಳಿಗೆ ಯಾವ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಮಾಡಿದ್ದಾರೆ ಎಂಬ ಮಾಹಿತಿ ತರಲು ಹೇಳಿದ್ದೇನೆ. ನಾವು ನಮ್ಮ ಮೂಲದಿಂದ ಮಾಹಿತಿ ಸಂಗ್ರಹಿಸಿದ್ದೇವೆ.
ರಾಹುಲ್ ಗುಣಗಾನ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ 72 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಸಾಲಮನ್ನಾ ಮಾಡಿದ್ದಾರೆ. ಈಗಿನ ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂಬುದು ಗೊತ್ತಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಪ್ರತಿ ತಿಂಗಳೂ ಒಂದು ದಿನ ರೈತರ ಸಭೆ ನಡೆಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ರೈತರಿಗೆ ಅಭಯ ನೀಡಿದ್ದಾರೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಪ್ರತಿಪಕ್ಷದ ಸದಸ್ಯ ಗೋವಿಂದ ಕಾರಜೋಳ ಮತ್ತಿತರ ನಾಯಕರು ಭಾಗವಹಿಸಿದ್ದಾರೆ.
Click this button or press Ctrl+G to toggle between Kannada and English