ಬೆಂಗಳೂರು: ಬುಧವಾರದೊಳಗಾಗಿ ಸಾಲಮನ್ನಾ ಘೋಷಣೆ ಮಾಡದೇ ಇದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ದೆಹಲಿಯಲ್ಲಿ ನೀಡಿದ್ದ ಹೇಳಿಕೆಯಂತೆ ಕುಮಾರಸ್ವಾಮಿ ನಡೆದುಕೊಳ್ಳಬೇಕು, ಸಾಲಮನ್ನಾ ಘೋಷಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೋರಾಟದ ಪರಿಣಾಮವಾಗಿ ಸಿಎಂ ಕುಮಾರಸ್ವಾಮಿ ರೈತ ಮುಖಂಡರ ಸಭೆ ಕರೆದಿದ್ದಾರೆ. 15 ದಿನಗಳಲ್ಲಿ ಸಣ್ಣ ರೈತರ ಸಾಲಮನ್ನಾ ಬಗ್ಗೆ ಮಾತನಾಡಿದ್ದಾರೆ. ಕುಮಾರಸ್ವಾಮಿ ನೀವು ಹೇಳಿದ್ದು ಏನು? ರೈತರ ವಿಚಾರದಲ್ಲಿ ದೊಂಬರಾಟ ಮಾಡುತ್ತಿದ್ದೀದರಾ? ಸಣ್ಣ ಅತೀ ಸಣ್ಣ ರೈತರು ಸಹಕಾರ ಸಂಘದಲ್ಲಿ 20 ಅಥವಾ 40 ಸಾವಿರ ಸಾಲ ಮಾಡಿರುತ್ತಾರೆ. ಈ ಹಿಂದಿನ ಸರ್ಕಾರ ಸಣ್ಣ ರೈತರ ಸಹಕಾರ ಸಂಘಗಳ ಸಾಲಮನ್ನಾ ಮಾಡಿದೆ. ನಿಮ್ಮ ಹೇಳಿಕೆಗೆ ತಕ್ಕಂತೆ ನಡೆದುಕೊಂಡಿಲ್ಲ. ಕುಮಾರಸ್ವಾಮಿ ರೈತರ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.
53 ಸಾವಿರ ಕೋಟಿ ಸಾಲಮನ್ನಾ ವಿಚಾರ ಏನಾಯ್ತು? ಧರ್ಮಸ್ಥಳದವರೆಗೂ ಹೋಗಿ ರೈತರ ಖಾಸಗಿ ಸಾಲಮನ್ನಾ ಮಾಡುವ ಕುರಿತು ಕುಮಾರಸ್ವಾಮಿ ಹೇಳಿದ್ದರು. ನುಡಿದ್ದಂತೆ ಕುಮಾರಸ್ವಾಮಿ 53 ಸಾವಿರ ಕೋಟಿ ಸಾಲಮನ್ನಾ ಮಾಡಬೇಕು. ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳದಿದ್ದರೆ ಬಿಜೆಪಿ ಹೋರಾಟ ಮುಂದುವರೆಯುತ್ತದೆ. 53 ಸಾವಿರ ಕೋಟಿ ಸಾಲಮನ್ನಾ ಮಾಡೋವರೆಗೂ ಬಿಜೆಪಿ ಹೋರಾಟ ನಿಲ್ಲಲ್ಲ. ಕೊಟ್ಟ ಮಾತು ತಪ್ಪಿ ರೈತರಿಗೆ ವಂಚನೆ ಮತ್ತು ಮೋಸ ಮಾಡಲಾಗಿದೆ. ಬಿಜೆಪಿ ಮುಂದಿನ ಹೋರಾಟದ ಬಗ್ಗೆ ಶೀಘ್ರದಲ್ಲೇ ತಿಳಿಸಲಾಗುವುದು ಎಂದರು.
ಫಸ್ಟ್ ಫೇಸಲ್ಲಿ ಸಣ್ಣ ಅತಿಸಣ್ಣ ರೈತರ ಸಾಲ ಮನ್ನಾ ಮಾಡ್ತಾರಂತೆ. ಸೆಕೆಂಡ್‌ಫೇಸಲ್ಲಿ ಮತ್ತೊಂದಂತೆ. ಡಿಸಿಎಂ ಪರಮೇಶ್ವರರನ್ನು ಪಕ್ಕಕ್ಕೆ ಕೂರಿಸಿಕೊಂಡು ಸಿಎಂ ಕುಮಾರಸ್ವಾಮಿ ರೈತರಿಗೆ ಮೋಸ ಮಾಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಕೇಳಿ ಸಾಲಮನ್ನಾ ಮಾಡುವುದಾದರೆ ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ರೈತರ ಸಾಲಮನ್ನಾ ಏಕೆ ಪ್ರಸ್ತಾಪಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
Click this button or press Ctrl+G to toggle between Kannada and English