ಉಜಿರೆ: ಯುವ ಜನತೆ ತಮ್ಮ ಉಜ್ವಲ ಭವಿಷ್ಯದ ಬಗ್ಗೆ ಸುಂದರ ಕನಸು ಕಂಡು ಅದನ್ನು ನನಸಾಗಿಸಲು ಪ್ರಯತ್ನಿಸಬೇಕು. ತಮ್ಮಲ್ಲಿರುವ ಅದಮ್ಯ ಉತ್ಸಾಹ, ಶಕ್ತಿ, ಸಾಮರ್ಥ್ಯವನ್ನು ಸದುಪಯೋಗ ಮಾಡಿ ದೇಶದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಬೇಕು. ಹೊಸ ಎಂಜಿನಿಯರಿಂಗ್ ಪದವೀಧರರು ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಹರಿಕಾರರಾಗಬೇಕು ಎಂದು ಬೆಂಗಳೂರಿನ ಎವೆರಿ ಇಂಡಿಯಾ ಸಂಸ್ಥೆಯ ಬ್ಯಾಂಕಿಂಗ್ ಮತ್ತು ಆರ್ಥಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಎಂ.ಡಿ. ನರಸಿಂಹಮೂರ್ತಿ ಹೇಳಿದರು.
ಅವರು ಭಾನುವಾರ ಉಜಿರೆಯಲ್ಲಿ ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕ ಸಂಚಿಕೆ ಧಿತಿಕಾ ಬಿಡುಗಡೆಗೊಳಿಸಿ, ಎಂಜಿನಿಯರಿಂಗ್ ಪದವಿ ಅಧ್ಯಯನ ಮುಗಿಸಿದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು.
ಇಂದು ತಂತ್ರಜ್ಞಾನ ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಿದೆ. ಕೆಮರಾ, ಕಾರುಗಳು, ವಸ್ತುಗಳ ಖರೀದಿ, ಹಣದ ವ್ಯವಹಾರ, ಸಂವಹನ, ಆರೋಗ್ಯ ಸೇವೆ, ಮಾಹಿತಿ ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಲ್ಲಿ ಅನೇಕ ಬದಲಾವಣೆ ಗಳಾಗಿವೆ. ಕಾಲೇಜಿನಲ್ಲಿ ಕಲಿತ ಪಠ್ಯಕ್ಕೂ, ನಿಜ ಜೀವನದಲ್ಲಿ ಎದುರಿಸುವ ಸಮಸ್ಯೆಗಳಿಗೂ ಅಜಗಜಾಂತರವಿದೆ. ತಮ್ಮಲ್ಲಿರುವ ಜ್ಞಾನ ಮತ್ತು ಅನುಭವವನ್ನು ಇತರರೊಂದಿಗೆ ಹಂಚಿಕೊಂಡು ಹೊಸ ವಿಷಯಗಳನ್ನು ಕಲಿಯಬೇಕು. ದೈನಂದಿನ ಸಮಸ್ಯೆಗಳನ್ನು, ಸವಾಲುಗಳನ್ನು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರಿಹರಿಸಬೇಕು. ಸೌಜನ್ಯ, ವಿನಯ, ಪ್ರಾಮಾಣಿಕತೆ, ಬದ್ಧತೆ ಮತ್ತು ಉತ್ತಮ ಸಂವಹನ ಕಲೆಯಿಂದ ಉದ್ಯಮದಲ್ಲಿ ಯಶಸ್ಸು ಪಡೆಯಬಹುದು, ಉನ್ನತ ಸಾಧನೆ ಮಾಡಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಮಾತನಾಡಿ, ಎಂಜಿನಿಯರ್‌ಗಳು ಸಾಮಾಜಿಕ ಹಾಗೂ ರಾಜಕೀಯ ರಂಗದಲ್ಲಿ ನಾಯಕತ್ವ ವಹಿಸಿ ದೇಶದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಬೇಕು. ತ್ಯಾಜ್ಯ ನಿರ್ವಹಣೆಯೊಂದಿಗೆ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಎಂಜಿನಿಯರ್‌ಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಸಲಹೆ ನೀಡಿದರು.
ತಾವು ಕಲಿತ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾಗಿ ಸಂಸ್ಥೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಅವರು ಕಿವಿಮಾತು ಹೇಳಿದರು.
ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸುರೇಶ್ ಸ್ವಾಗತಿಸಿದರು. ವಿಶ್ವನಾಥ ಭಟ್ ಧನ್ಯವಾದವಿತ್ತರು.
ಪ್ರಿಯಾಂಕ ಮತ್ತು ಆಕಾಶ್ ಕಾರ್ಯಮ ನಿರ್ವಹಿಸಿದರು.
Click this button or press Ctrl+G to toggle between Kannada and English