ಸಾಲ ಮನ್ನಾ ಘೋಷಣೆಗೆ ನಾನು ಈಗಲೂ ಬದ್ಧ, ಹಿಂದೆ ಸರಿಯುವ ಮಾತೇ ಇಲ್ಲ: ಕುಮಾರಸ್ವಾಮಿ

3:43 PM, Tuesday, June 19th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamyಬೆಂಗಳೂರು: ಸಾಲ ಮನ್ನಾ ಘೋಷಣೆಗೆ ನಾನು ಈಗಲೂ ಬದ್ಧ. ಸಾಲಮನ್ನಾದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಈ ವಿಷಯದಲ್ಲಿ ನಾನು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ನನ್ನ ಪ್ರಯತ್ನ ಮಾಡಿದ್ದೇನೆ. ಆದ್ರೆ, ಅವರು ಮಾಡೇ ಬಿಡ್ತಾರೆ ಅಂತ ತಿಳಿದುಕೊಂಡಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಸಿಎಂ ಹೆಚ್‌ಡಿಕೆ ಸಂವಾದ ನಡೆಸಿದರು. ಈ ವೇಳೆ, ಮೊದಲ ವಾರದಲ್ಲಿ ಬಜೆಟ್ ಮಂಡಿಸುವ ಬಗ್ಗೆ ಸಿಎಂ ಸುಳಿವು ನೀಡಿದರು.

ರಾಹುಲ್ ಗಾಂಧಿ ಅವರ ಸಲಹೆಗಳನ್ನ ಪಡೆದಿದ್ದೇನೆ. ಆದ್ರೆ ಯಾರ ವಿರುದ್ಧವೂ ನಾನು ಮಸಲತ್ತು ಮಾಡಿಲ್ಲ. ಎಷ್ಟೇ ಸಾವಿರ ಕೋಟಿ ಇರಲಿ ಅದು ರೈತರ ಕೈಗೆ ತಲುಪುವ ಹಾಗೆ ಪ್ಲಾನ್ ಮಾಡ್ತಿದ್ದೇನೆ. ಈ ಬಗ್ಗೆ ಇನ್ನೆರಡು ದಿನದಲ್ಲಿ ರಾಷ್ಟ್ರೀಯ ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ಕರೆದಿದ್ದೇನೆ. ರೈತರಿಗೆ ಹೊರೆ ಆಗದಂತೆ ಸಾಲಮನ್ನಾ ಮಾಡುವೆ ಎಂದು ಭರವಸೆ ನೀಡಿದರು.

ಲೋಕಸಭಾ ಚುನಾವಣೆವರೆಗೂ ನಾನೇ ಸಿಎಂ ಆಗಿರುತ್ತೇನೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ಸರ್ಕಾರ ಐದು ವರ್ಷ ಇರುತ್ತೆ. ಅದರಲ್ಲಿ ಯಾವುದೆ ಅನುಮಾನ ಬೇಡ. ಆದರೆ ಮಾಧ್ಯಮದವರಿಗಿದ್ದ ಅನುಮಾನ ಸಂಬಂಧ ಮಾಧ್ಯಮದವರ ದಾಟಿಯಲ್ಲಿ ಉತ್ತರಿಸಿದ್ದೇನೆ ಎಂದರು.

ದೆಹಲಿಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಭಾವಹಿಸಿ, ರೈತರ ಸಾಲಮನ್ನಾ ವಿಚಾರವಾಗಿ ಪ್ರಧಾನಿ ಬಳಿ ಸಹಾಯ ಕೇಳಿದ್ದೇನೆ. ನಾನು ಪ್ರಧಾನಿಯವರ ಬಳಿ ರೈತರ ಬಗ್ಗೆ ಕೇಳಿದ್ದು ಅವರ ನೈತಿಕತೆ ಅರಿಯಲು ಹೊರೆತು, ಕೇಂದ್ರದ ಮೇಲೆ ಬೊಟ್ಟು ತೋರಿಸಿ ಪಲಾಯನ ಆಗಲು ಅಲ್ಲ ಎಂದು ತಿಳಿಸಿದರು.

ಮಾಧ್ಯಮದವರು ರಾಜ್ಯದ ಸಮಸ್ಯೆಗಳ ಮೂಲಕ ಸರ್ಕಾರದ ಗಮನ ಸೆಳೆಯಲಿ. ಇದರಿಂದ ನಮ್ಮ ಸರ್ಕಾರಕ್ಕೆ ಏನು ಮಾಡಬೇಕು ಏನು ಮಾಡಬಾರದೆಂಬ ಮನವರಿಕೆ ಆಗುತ್ತೆ. ನಾವು ಇಬ್ಬರೂ ಕೈ ಜೊಡಿಸಿದ್ರೆ ರಾಜ್ಯದ ಅಭಿವೃದ್ಧಿ ಸಾಧ್ಯ. ಕುಮಾರಸ್ವಾಮಿ ಎಂಬ ವ್ಯಕ್ತಿ ಇವತ್ತಿಗೂ ರಾಜಕೀಯದಲ್ಲಿ ಇದ್ದಾನೆ ಎಂದರೆ ಅದಕ್ಕೆ ಮಾಧ್ಯಮದವರೂ ಕಾರಣ. ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಮಾಧ್ಯಮದವರೇ ನನ್ನನ್ನು ಜೀವಂತವಾಗಿ ಇರಿಸಿದ್ದವರು ಎಂದು ಸಿಎಂ ಹೇಳಿದರು.

ಗ್ರಾಮವಾಸ್ತವ್ಯವನ್ನು ಆರಂಭಿಸುತ್ತೇನೆ. ನಾನು ಸೇವಕನಾಗಿ ಜನರ ಮನೆಗೆ ಹೋಗುತ್ತೇನೆ. ಜನರ ಕಷ್ಟಗಳಿಗೆ ಪರಿಹಾರ ಒದಗಿಸೋದೆ ನನ್ನ ಗುರಿ. ಮುಖ್ಯಮಂತ್ರಿ ಆಗಿ ನನ್ನದೇ ಆದ ದೊಡ್ಡ ಕನಸುಗಳನ್ನು ಇಟ್ಟುಕೊಂಡಿದ್ದೇನೆ. ಎಲ್ಲವನ್ನು ಕೂಡಲೇ ಸರಿಪಡಿಸುವುದಕ್ಕೆ ಸಾಧ್ಯವಿಲ್ಲ. ಆಡಳಿತದಲ್ಲಿ ಕೆಲವು ಕಠಿಣ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.

ನನಗೆ ಇರುವ ಭದ್ರತೆ ಕಡಿಮೆ ಮಾಡಲು ಅಧಿಕಾರಿಗಳನ್ನು ಕೇಳಿದೆ. ಆದರೆ ಅದು ಸಾಧ್ಯವಿಲ್ಲ. ಮುಖ್ಯಮಂತ್ರಿ ಆದ ಮೇಲೆ ಇಷ್ಟೊಂದು ಭದ್ರತೆ ಕೊಡಲೇಬೇಕಾಗುತ್ತೆ. ಹಾಗಾಗಿ ನಾನು ಇವತ್ತಿಗೂ ಇಷ್ಟೊಂದು ಭದ್ರತೆಯಲ್ಲಿ ಇದ್ದೇನೆ. ಆದರೆ ಸರ್ಕಾರದ ಹಣ ದುಂದು ವೆಚ್ಚ ಮಾಡುವುದು ಬೇಡ ಅಂತಾ ತೀರ್ಮಾನ ಮಾಡಿದ್ದೇನೆ. ನಾನು ದೆಹಲಿಗೆ ಎರಡು ಬಾರಿ ಹೋದಾಗ ವಿಶೇಷ ವಿಮಾನದಲ್ಲಿ ಪ್ರಯಾಣ ಮಾಡಿಲ್ಲ ಎಂದು ತಿಳಿಸಿದರು.

ವೈಜ್ಞಾನಿಕ ಸಾಲ‌ಮನ್ನಾ ವಿಚಾರ: ನನ್ನ ಉದ್ದೇಶ ನಿಜವಾಗಿಯೂ ಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡುವುದು. ಹೀಗಾಗಿ ಹಣಕಾಸು ಇಲಾಖೆ ಅಧಿಕಾರಿಗಳು ಈಗ ಕೆಲವು ಸಲಹೆ ನೀಡಿದ್ದಾರೆ ಎಂದರು.

ನೀರಾವರಿಗಾಗಿ ನಮ್ಮ ಬಳಿ ಹಣದ ಕೊರತೆ ಇಲ್ಲ. ಇಲ್ಲ ಸಲ್ಲದ ಆರೋಪ ಮಾಡುವುದು ಬೇಡ. ಸಾಲ ಮನ್ನಾ ಕಾರ್ಯಕ್ರಮದಿಂದ ಉತ್ತರ ಕರ್ನಾಟಕದ ರೈತರಿಗೆ ಹೆಚ್ಚು ಅನುಕೂಲ ಆಗುತ್ತೆ ಎಂದರು.

ಪ್ರತಿದಿನ ನಮ್ಮ ಬಳಿ 500ನಿಂದ 600 ಜನಸಾಮಾನ್ಯರು ಇರುತ್ತಾರೆ. ಅವರ ಸಮಸ್ಯೆಗಳನ್ನು ಆಲಿಸಿ‌ ಮುಂದಿನ‌ ಕಾರ್ಯಕ್ರಮಕ್ಕೆ ಹೊಗಬೇಕಾದ್ರೆ ತಡ ಆಗುತ್ತದೆ. ಕಾರ್ಯಕ್ರಮಕ್ಕೆ ತಡವಾಗಿ ಬಂದಿದಕ್ಕೆ ಇದೇ ವೇಳೆ ಸಿಎಂ ಕ್ಷಮೆ ಕೋರಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English