ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ ಸಿಎಂ ಈಗ ಶುದ್ಧ ಸಸ್ಯಹಾರಿ..!

1:55 PM, Wednesday, June 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

siddaramaihಮಂಗಳೂರು: ನಾಟಿ ಕೋಳಿ, ಬನ್ನೂರು ಮಟನ್ ಹಾಗು ಪಾಯ ಸೂಪ್ ಎಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪಂಚಪ್ರಾಣ. ಮುಂಜಾನೆ ಅವರಿಗೆ ಪಾಯ ಸೂಪ್ ಬೇಕೇ ಬೇಕು. ಹೆಚ್ಚಾಗಿ ಮಾಂಸಾಹಾರಕ್ಕೆ ಒಲವು ತೋರುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಆಪ್ಪಟ ಸಸ್ಯಹಾರಿ. ಅರೆರೆ ಇದು ಹೇಗೆ ಸಾಧ್ಯ ಎಂಬ ಕುತೂಹಲವೇ? ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿ ವನದಲ್ಲಿ ಪ್ರಾಕೃತಿಕ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಈಗ ಸಸ್ಯಹಾರಿಯಾಗಿ ಬದಲಾಗಿದ್ದಾರೆ.

ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ ಸಿಎಂ ಈಗ ಪ್ರತಿನಿತ್ಯ ಪಥ್ಯಾಹಾರ ಸೇವಿಸುತ್ತಿದ್ದಾರೆ. 12 ದಿನಗಳ ಪ್ರಾಕೃತಿಕ ಚಿಕಿತ್ಸೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನಕ್ಕೆ ಆಗಮಿಸಿರುವ ಸಿದ್ದರಾಮಯ್ಯ ಕಟ್ಟು ನಿಟ್ಟಾಗಿ ಪಥ್ಯಾಹಾರ ಸೇವಿಸುತ್ತಿದ್ದಾರೆ. ಕಳೆದ ವರ್ಷ ಮೀನು ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋದರೆಂಬ ವಿವಾದ ಹೊತ್ತಿದ್ದ ಸಿದ್ದರಾಮಯ್ಯ ಈಗ ಅದೇ ಧರ್ಮಸ್ಥಳದ ಚಿಕಿತ್ಸಾಲಯದಲ್ಲಿ ಸಸ್ಯಹಾರಿಯಾಗಿ ಬದಲಾಗಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯದಲ್ಲಿ ದಾಖಲಾಗಿರುವ ಸಿದ್ದರಾಮಯ್ಯ ಮೂರು ದಿನಗಳನ್ನು ಕಳೆದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿಶ್ರಾಂತಿ ಪಡೆಯದೇ ರಾಜ್ಯದ ಮೂಲೆ ಮೂಲೆ ಸುತ್ತಿದ ಸಿದ್ದರಾಮಯ್ಯ ಶುಗರ್, ಬಿಪಿ ಹೆಚ್ಚಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಕೃತಿಕ ಚಿಕಿತ್ಸೆಗೆ ಒಳಗಾಗಿರುವ 69ರ ಹರೆಯದ ಸಿದ್ದರಾಮಯ್ಯ ಅವರಿಗೆ ಈಗ ಮಾಂಸಾಹಾರ ಸಂಪೂರ್ಣ ವರ್ಜ್ಯ. ಚಿಕಿತ್ಸಾ ಕೇಂದ್ರದಲ್ಲಿ ಅವರ ದಿನಚರಿ ಆರಂಭ ವಾಗುವುದೇ ಬೆಳ್ಳಂಬೆಳಗ್ಗೆ 6 ಗಂಟೆಗೆ.

ಮುಂಜಾನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿದ ಬಳಕ ಯೋಗ, ಪ್ರಾಣಾಯಾಮ, 9 ಗಂಟೆಗೆ ಸರಿಯಾಗಿ ರಾಗಿ ಗಂಜಿ ಸೇವಿಸುತ್ತಾರೆ. 11 ಗಂಟೆಗೆ ಹಸಿ ತರಕಾರಿಯೇ ಸಿದ್ದರಾಮಯ್ಯ ಅವರಿಗೆ ಮಧ್ಯಾಹ್ನದ ಊಟ. ಹಸಿ ತರಕಾರಿ, ಮೊಳಕೆ ಬಂದ ಕಾಳು, ಸೌತೆಕಾಯಿ, ಕ್ಯಾರೆಟ್, ಬೀಟ್ ರೂಟ್ ನ ಸಲಾಡ್ ಮತ್ತು ಮಜ್ಜಿಗೆ ಮಾತ್ರ. ಸಿದ್ದರಾಮಯ್ಯ ಸೇವಿಸುವ ಯಾವ ಅಹಾರದಲ್ಲೂ ಉಪ್ಪು, ಹುಳಿ, ಖಾರ ಇಲ್ಲ. ಅನ್ನವೂ ಇಲ್ಲದ ಊಟ.

ಸಂಜೆ ಸರಿಸುಮಾರು 6.30ಕ್ಕೆ ರಾತ್ರಿ ಊಟ. ಬೇಯಿಸಿದ ತರಕಾರಿ, ಎರಡು ಚಪಾತಿ, ಮಜ್ಜಿಗೆ, ಪಪ್ಪಾಯಿ ಅಷ್ಟನ್ನೇ ಸಿದ್ದು ಅವರಿಗೆ ಸೇವಿಸಲು ಅವಕಾಶ. ಇದರ ನಡುವೆ, ವಿಶ್ರಾಂತಿ, ಜಲ ಚಿಕಿತ್ಸೆ, ಹೈಡ್ರೋಥೆರಪಿ, ಮಸಾಜ್ ಇರುತ್ತದೆ. ಈ ಚಿಕಿತ್ಸೆಯ ಸಂದರ್ಭದಲ್ಲಿ ಶಾಂತಿಧಾಮದಿಂದ ಹೊರಹೋಗುವಂತಿಲ್ಲ. ರಾತ್ರಿ ಹತ್ತು ಗಂಟೆಗೆ ನಿದ್ದೆ. ಸದಾ ರಾಜಕೀಯ ತಂತ್ರಗಾರಿಗೆ , ಆಡಳಿತಾತ್ಮಕ ಒತ್ತಡ, ವಿರೋಧ ಪಕ್ಷಕ್ಕೆ ತಿರುಗೇಟು ನೀಡುವ ಚಿಂತನೆ, ಸದಾ ನೂರಾರು ಬೆಂಬಲಿಗರ ನಡುವೆ ಇದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪೂರ್ಣ ಬದಲಾಗಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English