ಮಂಗಳೂರು: ತುಳುನಾಡಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಾಂಪ್ರದಾಯಕ ಹಾಗೂ ಆಧುನಿಕ ತಂತ್ರಜ್ಷಾನದ ಬಳಕೆಯಾಗಬೇಕು ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ ರವರು ಹೇಳಿದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳುಭವನದ ಕಟ್ಟಡದ ಸಿರಿಚಾವಡಿಯಲ್ಲಿ ಬುಧವಾರ ನಡೆದ ಸರಳ ಸಮಾರಂಭದಲ್ಲಿ ಎಲ್.ಸಿ.ಡಿ ಪ್ರೊಜೆಕ್ಟರ್‌ನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದರು.
ತುಳುಭಾಷೆಗೆ ಭವ್ಯವಾದ ಇತಿಹಾಸವಿದೆ. ಮೌಲಿಕವಾದ ಸಾಹಿತ್ಯ ಪರಂಪರೆವಿದೆ. ತುಳುವರಲ್ಲಿ ಹೋರಾಟದ ಕಿಚ್ಚು ಇದೆ. ಪ್ರಾಮಾಣಿಕತೆ, ನಿಷ್ಠೆ ತುಳುವರ ಮೂಲ ಗುಣ ಆಗಿದೆ. ಆದರೂ ತುಳು ಭಾಷೆಗೆ ಸಂವಿಧಾನದ ಮಾನ್ಯತೆ ದೊರಕಿಲ್ಲ. ೮ನೇ ಪರಿಚೇದಕ್ಕೆ ತುಳುಭಾಷೆ ಸೇರಬೇಕು ಎನ್ನುವುದು ತುಳುವರ ಒಕ್ಕೊರಲ ಬೇಡಿಕೆ ಆಗಿದೆ. ಈ ಗುರಿಯನ್ನು ಸಾಧಿಸಲು ಎಲ್ಲಾ ರೀತಿಯ ಪ್ರಯತ್ನಗಳು ಇಂದಿನ ದಿನಗಳಲ್ಲಿ ಆಗುತ್ತಿದೆ. ಅಕಾಡೆಮಿ ವತಿಯಿಂದ ತುಳುವನ್ನು ಜಾಗತಿಕ ಮಟ್ಟಕ್ಕೆ ಏರಿಸುವ ಪ್ರಯತ್ನ ವಾಗುತ್ತಿರುವುದು ಶ್ಲಾಘನಾರ್ಹವಾಗಿದೆ ಎಂದು ಡಾ. ಸದಾನಂದ ಪೆರ್ಲ ರವರು ಅಭಿಪ್ರಾಯ ಪಟ್ಟರು.
ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಳು ಭಾಷೆಯ ಕೃತಿಗಳನ್ನು ಅನ್ಯ ಭಾಷೆಗೆ ಅನುವಾದಿಸಿ ತುಳುವನ್ನು ಇತರ ಭಾಷೆಯವರಿಗೆ ತಿಳಿಸುವ ಕೆಲಸ ಆಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ತುಳು ಭಾಷೆಯನ್ನು ಅಳವಡಿಸುವ ಕಾರ‍್ಯ ನಡೆಯುತ್ತಿದೆ. ಜತೆಯಲ್ಲಿ ಅಕಾಡೆಮಿಯಲ್ಲಿ ಸುಸಜ್ಜಿತ ಸಭಾಂಗಣ ವಸ್ತು ಸಂಗ್ರಹಾಲಯದ ನಿರ್ಮಾಣ ಆಗಬೇಕಾಗಿದೆ ಎಂದು ಅವರು ಹೇಳಿದರು.
ಅಕಾಡೆಮಿ ಸದಸ್ಯರಾದ ಶಿವಾನಂದ ಕರ್ಕೇರ, ಬೆನೆಟ್ ಅಮ್ಮಣ್ಣ, ಡಾ.ವಾಸುದೇವ ಬೆಳ್ಳೆ, ಪ್ರಭಾಕರ ನೀರುಮಾರ್ಗ ಪ್ರಮುಖರಾದ ಯೋಗೀಶ್ ಶೆಟ್ಟಿ ಜೆಪ್ಪು, ಡಾ. ಕಿಶೋರ್ ಕುಮಾರ್ ಶೇಣಿ, ನಂದಳಿಕೆ ಬಾಲಚಂದ್ರ ರಾವ್, ಮೋಹನ್ ಕೊಪ್ಪಲ ಕದ್ರಿ, ಡಿ.ಎಂ.ಕುಲಾಲ್, ರಂಗ ಕಲಾವಿದ ತಮ್ಮ ಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ತಾರಾನಾಥ ಗಟ್ಟಿ ಕಾಪಿಕಾಡ್ ಸ್ವಾಗತಿಸಿ ನಿರೂಪಿಸಿದರು. ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ರವರು ವಂದಿಸಿದರು.
Click this button or press Ctrl+G to toggle between Kannada and English