ಕೊಪ್ಪಳ: ಒಪ್ಪಂದದಂತೆ ನಾವು ಐದು ವರ್ಷ ಸರ್ಕಾರ ಮಾಡೇ ಮಾಡ್ತೀವಿ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ನಾವು ಐದು ವರ್ಷ ಸರ್ಕಾರ ಮಾಡ್ತಿವಿ ಎಂದು ಒಪ್ಪಂದ ಮಾಡಿಕೊಂಡಿದ್ದೇವೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ. ಹೈಕಮಾಂಡ್ ಸೂಚನೆಯಂತೆ ಸಮ್ಮಿಶ್ರ ಸರ್ಕಾರ 5 ವರ್ಷ ಕಂಪ್ಲೀಟ್ ಮಾಡುತ್ತದೆ. ಸರ್ಕಾರ ಬೀಳಿಸುವ ಕುರಿತು ಯಾರೇ ಮಾತನಾಡಿದರೂ ಸಹ ಅದು ಅಪ್ರಸ್ತುತ. ಒಪ್ಪಂದದಂತೆ ಐದು ವರ್ಷ ಸರ್ಕಾರ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬಜೆಟ್ ಅಧಿವೇಶನಕ್ಕೆ ಸಚಿವ ಡಿಕೆಶಿ ಗೈರಾಗುವ ವಿಚಾರ ನನಗೆ ಗೊತ್ತಿಲ್ಲ. ಬಜೆಟ್ ವಿಚಾರವಾಗಿ ನಿನ್ನೆ ಸಾಕಷ್ಟು ಚರ್ಚೆ ಮಾಡಲಾಗಿದೆ. ಗೃಹ ಇಲಾಖೆಗೆ ಬಜೆಟ್ನಲ್ಲಿ ಹಣಕಾಸಿನ ನೆರವು ನೀಡುವಂತೆ ಮನವಿ ಮಾಡಿದ್ದೇನೆ. ಪೊಲೀಸ್ ಗೃಹ ಯೋಜನೆಯಡಿ 11 ಸಾವಿರ ಮನೆ ನಿರ್ಮಾಣಕ್ಕೆ ಅಂದಾಜು ಮಾಡಲಾಗಿದೆ. 20 – 20 ಅಳತೆಯಲ್ಲಿ 11 ಸಾವಿರ ಮನೆ ಕಟ್ಟಲು 1800 ಕೋಟಿ ಹಣ ಮೀಸಲಿಡಲಾಗಿದೆ. ಪ್ರತಿ ವರ್ಷ ಹಣ ನೀಡಲು ಪ್ರಸ್ತಾಪ ಇಡಲಾಗಿದೆ ಎಂದು ಹೇಳಿದರು.
ರೈತರ ಸಾಲಮನ್ನಾ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಸರ್ಕಾರದ ಭಾಗವಾದ ಕಾಂಗ್ರೆಸ್ ಪಕ್ಷ ಸಾಲಮನ್ನಾಕ್ಕೆ ಸಂಪೂರ್ಣ ಸಹಮತ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಶೀಘ್ರ ನೇಮಕ ಮಾಡಲಾಗುವುದು. ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಲ್ಲ, ಮಾಡೋದು ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಖಾಸಗಿಯಾಗಿ ಮಾತನಾಡಿರುವ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಸರ್ಕಾರದ ಸ್ಥಿರತೆ ಬಗ್ಗೆ ಸಿಎಂ ಎಲ್ಲಾದರೂ ಮಾತಾಡಿದ್ದಾರಾ ಎಂದು ಇದೇ ವೇಳೆ ಮಾಧ್ಯಮದವರನ್ನು ಪ್ರಶ್ನಿಸಿದರು. ಇನ್ನು ದೇವಸ್ಥಾನದಲ್ಲಿ ಕಾಲು ಮುಗಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಗರಂ ಆದ ಡಿಸಿಎಂ, ಇಂತಹ ಸಿಲ್ಲಿ ಪ್ರಶ್ನೆ ಯಾಕೆ? ನಾನು ಯಾರಿಗೂ ಕಾಲು ಮುಗಿಯಲು ಹೇಳಿಲ್ಲ. ಕಾಲು ಮುಗಿದಿದ್ದು ನನಗೆ ಗೊತ್ತೆ ಇಲ್ಲ. ನಾನು ಮಾತ್ರ ಕೈ ಮುಗಿದಿದ್ದೇನೆ. ಕೈ ಮುಗಿಯುವುದು ನಮ್ಮ ಸಂಪ್ರದಾಯ ಎಂದು ಹೇಳಿದರು.
Click this button or press Ctrl+G to toggle between Kannada and English