ಅಳಿವಿನ ಅಂಚಿನಲ್ಲಿರುವ ಸಿಹಿನೀರಿನ ಮೀನು ಮರಿಗಳ ಮೂಲ ಆವಾಸಕ್ಕೆ ಬಿಡುಗಡೆ

9:41 PM, Saturday, June 30th, 2018
Share
1 Star2 Stars3 Stars4 Stars5 Stars
(No Ratings Yet)
Loading...
pilikula ಮಂಗಳೂರು   : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಸಂತಾನೋತ್ಪತ್ತಿ ಮಾಡಿ ಬೆಳೆಸಿದ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಸಿಹಿನೀರಿನ ಮತ್ಸ್ಯಪ್ರಬೇಧಗಳ ಮರಿಗಳನ್ನು ಅವುಗಳ ಮೂಲ ಆವಾಸಕ್ಕೆ ಬಿಡುವ ಕಾರ್ಯಕ್ರವಮವು ಕರ್ನಾಟಕ ಅರಣ್ಯ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ದ.ಕ. ಜಿಲ್ಲಾ ಪಂಚಾಯತ್‍ನ ಸಹಯೋಗದೊಂದಿಗೆ ಜೂನ್ 28 ರಂದು ನಾರಾವಿಯಲ್ಲಿರುವ ಅರಣ್ಯ ವಿಶ್ರಾಂತಿ ಗೃಹದಲ್ಲಿ ನಡೆಯಿತು.

ಅಥಿತಿಗಳನ್ನು ಸ್ವಾಗತಿಸಿ ಮಾತನಾಡಿದ ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿದೇಶಕ ವಿ. ಪ್ರಸನ್ನ, ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್‍ಗಾರ್ಡನ್‍ನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪಶ್ಚಿಮ ಘಟ್ಟದ ಅಳಿವಿನ ಅಂಚಿನಲ್ಲಿರುವ ಮತ್ಸ್ಯಪ್ರಬೇಧಗಳ ಸಂತಾನೋತ್ಪತ್ತಿ ಮತ್ತು ಅಕ್ವೇರಿಯಂ ಸ್ಥಾಪನೆ ಶೀರ್ಷಿಕೆಯಡಿಯಲ್ಲಿ ರೂ. 98 ಲಕ್ಷದ ಅನುದಾನದಲ್ಲಿ ಅಕ್ವೇರಿಯಂನ್ನು ಸ್ಥಾಪಿಸಿ ಸುಮಾರು 22 ಜಾತಿಯ ಮೀನುಗಳನ್ನು ಸಾಕಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡುವುದರ ಜೊತೆಗೆ ವಿನಾಶದ ಅಂಚಿನಲ್ಲಿರುವ ಕಿಜಾನ್, ಮಲಬಾರ್ ಡೈನೊ, ಚಂದ್ರಡಿಕೆ ಮುಂತಾದ ಇತರೆ ಮೀನುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡಿ ಅವುಗಳ ಮರಿಗಳನ್ನು ಪಶ್ಚಿಮ ಘಟ್ಟದ ಮೂಲ ಅವಾಸ ಸ್ಥಾನಕ್ಕೆ ಕೊಂಡೊಯ್ದು ಬಿಡುವುದು ಯೋಜನೆಯ ಮುಖ್ಯ ಉದ್ದೇಶ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್. ರವಿ ಇವರು ಮತನಾಡಿ ಪ್ರಕೃತಿಯ ಸಮತೋಲನ ಕಾಪಾಡಲು ಎಲ್ಲಾ ಜೀವಿರಾಶಿಗಳ ಉಳಿವು ಅಗತ್ಯ. ಆದರೆ ಇಂದು ನಾವು ನಮ್ಮ ಸ್ವಾರ್ಥಕ್ಕಾಗಿ ಇತರ ಜೀವರಾಶಿಗಳನ್ನು ನಾಶಮಾಡುತ್ತ ಬಂದಿದ್ದೇವೆ. ಇಂತಹ ಜೀವಿರಾಶಿಗಳ ಸಂರಕ್ಷಣೆಗೆ  ಇಲಾಖೆಗಳು ಕೈಜೋಡಿಸಿವೆ.  ಪಿಲಿಕುಳ ನಿಸರ್ಗಧಾಮದಿಂದ ಅಳಿವಿನಂಚಿನಲ್ಲಿರುವ ಮೀನು ಪ್ರಭೇದಗಳ ಸಂರಕ್ಷಣಾ ಕೆಲಸ ಆಗುತ್ತಿದೆ ಎಂದರು.
pilikula
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಮಾತನಾಡಿ ಅಳಿವಿನಂಚಿನಲ್ಲಿರುವ ಮತ್ಸ್ಯಪ್ರಭೇದಗಳ ಸಂರಕ್ಷಣೆಗೆ ಮುಂದಾಗಿರುವ ಪಿಲಿಕುಳ ನಿಸರ್ಗಧಾಮದ ಕೆಲಸ ಶ್ಲಾಘನೀಯ,  ಪಿಲಿಕುಳದಲ್ಲಿ ಸಂತಾನೋತ್ಪತ್ತಿ ಮಾಡಿದ ಅಳಿವಿನಂಚಿನಲ್ಲಿರುವ ಮೀನುಗಳ ಮರಿಗಳನ್ನು ಅವುಗಳ ಮೂಲ ಆವಾಸಕ್ಕೆ ಬಿಡುಗಡೆ ಮಾಡಲು ಬೆಳ್ತಂಗಡಿ ಕ್ಷೇತ್ರದ ಪ್ರದೇಶಗಳನ್ನು ಆಯ್ಕೆ ಮಾಡಿರುವುದಕ್ಕೆ ತುಂಬಾ ಸಂತೋಷ ವ್ಯಕ್ತಪಡಿಸುತ್ತಾ ಇಂತಹ ಅನೇಕ ಸಂರಕ್ಷಣಾ ಕೆಲಸಗಳು ಪಿಲಿಕುಳದಿಂದ ಆಗಲಿ ಎಂದರು.

ನಾರಾವಿ ಜಿಲ್ಲಾ ಪಂಚಾಯತ್ ಸದಸ್ಯ ಪಿ. ಧರಣೇಂದ್ರ ಕುಮಾರ್, ಮಂಗಳೂರು ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಸುಶ್ಮಿತಾ, ನಾರಾವಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ  ಯಶೋಧ, ಸದಸ್ಯ  ಉದಯ ಹೆಗ್ಡೆ, ಕುತ್ಲೂರು ಅರಣ್ಯ ಸಮಿತಿ ಅಧ್ಯಕ್ಷ  ಶ್ರೀಧರ ಪೂಜಾರಿ, ತಾಲೂಕು ಇಲಾಖಾಧಿಕಾರಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು. ವೇಣೂರು ವಲಯ ಅರಣ್ಯಾಧಿಕಾರಿ ಪ್ರಶಾಂತ ಪೈ ಕಾರ್ಯಕ್ರಮ ನಿರ್ವಹಿಸಿ ವಂದಿಸಿರು.

ಸಮಾರಂಭದ ಬಳಿಕ ಮೀನು ಮರಿಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ನಾರಾವಿ ಪರಿಸರದ ಕುತ್ಲೂರು ನದಿಗೆ ಶಾಸಕ ಹರೀಶ ಪೂಂಜರವರು ಮೀನುಮರಿಗಳನ್ನು ಬಿಡುವುದರ ಮೂಲಕ ಮೀನುಮರಿಗಳ ಆವಾಸಕ್ಕೆ ಬಿಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪಿಲಿಕುಳ ನಿಸರ್ಗಧಾಮದ ಪ್ರಿನ್ಸಿಪಾಲ್ ಸೈಂಟಿಸ್ಟ್ ಡಾ. ಸೂರ್ಯಪ್ರಕಾಶ್ ಶೆಣೈ, ವೈಜ್ಞಾನಿಕ ಅಧಿಕಾರಿ  ರಾಮಕೃಷ್ಣ ಮರಾಟಿ, ಪಿಲಿಕುಳ ಔಷಧಿವನದ ಮೇಲ್ವಿಚಾರಕ ಉದಯಕುಮಾರ್ ಶೆಟ್ಟಿ, ಅಕ್ವೇರಿಯಂ ಮೇಲ್ವಿಚಾರಕ ನಾಗೇಶ್ ಕುಲಾಲ, ಕ್ಷೇತ್ರ ಸಹಾಯಕ  ರವಿ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಯವರು ಮೀನು ಮರಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English