ಮಂಗಳೂರು: ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುವ ಸ್ಥಿತಿ ಜೈಲಿನಲ್ಲಿರುವ ಪೋಷಕರ ಮಕ್ಕಳದ್ದು. ವಿವಿಧ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಬಂಧಿತರಾಗಿ ವಿಚಾರಣಾಧೀನ ಕೈದಿಗಳಾಗಿ ಬದುಕುತ್ತಿರುವ ಮಹಿಳಾ ಕೈದಿಗಳ ಮಕ್ಕಳಿಗೆ ಜೈಲಿನಲ್ಲಿ ಶಿಕ್ಷಣ ಎನ್ನುವುದು ಮರೀಚೀಕೆಯಾಗಿದೆ ಎನ್ನುವುದನ್ನು ಮನಗಂಡಿರುವ ಸುಪ್ರೀಂಕೋರ್ಟ್ ಜೈಲಿನಲ್ಲಿ ಪೋಷಕರ ಜೊತೆಗೆ ಇರುವ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ತಾಕೀತು ಮಾಡಿದೆ.
ಇದರ ಪರಿಣಾಮವಾಗಿ ಈಗ ಮಂಗಳೂರು ಕಾರಾಗೃಹದಲ್ಲೂ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸ ಆರಂಭಗೊಂಡಿದೆ. ಕಾರಾಗೃಹದಲ್ಲಿರುವ ವಿಚಾರಣಾಧೀನ ಬಂದಿಗಳ ಮೂವರು ಮಕ್ಕಳಿಗೆ ಜುಲೈ 3 ರಿಂದ ಶಿಕ್ಷಣ ಪಡೆಯುವ ಅವಕಾಶ ದೊರೆತಿದೆ. ಜೈಲು ಸನಿಹದ ಅಂಗನವಾಡಿ ಕೇಂದ್ರವೊಂದರ ಶಿಕ್ಷಕಿಯೊಬ್ಬರು ಜೈಲಿಗೇ ಆಗಮಿಸಿ ಈ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ.
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಒಟ್ಟು 9 ಮಂದಿ ಮಹಿಳಾ ವಿಚಾರಣಾಧೀನ ಕೈದಿಗಳಿದ್ದಾರೆ. ಆ ಪೈಕಿ ಮೂವರು ತಮ್ಮ ಮಕ್ಕಳನ್ನು ತಮ್ಮೊಂದಿಗೇ ಇಟ್ಟುಕೊಂಡಿದ್ದಾರೆ. ಜೈಲಿನಲ್ಲಿ ಹೆತ್ತವರೊಂದಿಗಿರುವ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಜೈಲಿನಲ್ಲಿ ಏನೂ ತಿಳಿಯದೆ ತಮ್ಮ ಬಾಲ್ಯದ ಆಟ, ಪಾಠಗಳಿಂದ ವಂಚಿತರಾಗಿರುವ ಮಕ್ಕಳಿಗೆ ಕಲಿಯುವ ಯೋಗ ಸಿಕ್ಕಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಖಾಂತರ ಸನಿಹದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರತಿದಿನ ಜೈಲಿಗೆ ತೆರಳಿ ಒಂದು ಗಂಟೆ ಕಾಲ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಪ್ರಕಾರ ಜೈಲಿನ ಸಿಬ್ಬಂದಿಯೇ ಶಿಕ್ಷಣ ನೀಡಬೇಕು. ಆದರೆ ಮಂಗಳೂರು ಕಾರಾಗೃಹದ ವಿಚಾರಕ್ಕೆ ಬಂದರೆ ಪಾಠ ಮಾಡಲು ಪ್ರತ್ಯೇಕ ಸಿಬ್ಬಂದಿ ಇಲ್ಲ. ಅದಕ್ಕಾಗಿ ಸನಿಹದ ಅಂಗನವಾಡಿ ಕೇಂದ್ರದ ಶಿಕ್ಷಕಿಯನ್ನೇ ನಿಯೋಜಿಸಲಾಗಿದೆ. ಈ ಮಧ್ಯೆ ಮಹಿಳಾ ಬಂಧಿಗಳಿಗೆ ಯೋಗ ತರಬೇತಿ, ಟೈಲರಿಂಗ್ ಮೆಶಿನ್ ಮತ್ತಿತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ರೋಟರಿ ಕ್ಲಬ್ ಹಿಲ್‌ಸೈಡ್ ಮುಂತಾದ ಸಂಸ್ಥೆಗಳು ಮುಂದೆ ಬಂದಿವೆ. ಈ ಮೂಲಕ ಪುಟ್ಟ ಮಕ್ಕಳ ಬಾಳು ಬರಡಾಗುವುದನ್ನು ತಪ್ಪಿಸಲು ಜಿಲ್ಲಾ ಕಾರಾಗೃಹವು ಕ್ರಮ ಕೈಗೊಂಡಿದೆ.
Click this button or press Ctrl+G to toggle between Kannada and English