ಕಾರವಾರ: ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥದಲ್ಲಿ ನಿರ್ಮಿಸಲಾಗುತ್ತಿರುವ ಸುರಂಗ ಮಾರ್ಗಗಗಳ ಕಾಮಗಾರಿಗೆ ಮಳೆ ಅಡ್ಡಿಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡದ ಮೇಲ್ಭಾಗದ ಝರಿ ನೀರು ಸುರಂಗದೊಳಕ್ಕೆ ನುಗ್ಗುತ್ತಿದ್ದು, ಒಂದು ಮಾರ್ಗದ ಕಾಮಗಾರಿಯೇ ಸ್ಥಗಿತಗೊಂಡಿದೆ.
ಕಾರವಾರದ ಜಿಲ್ಲಾಧಿಕಾರಿ ವಸತಿಗೃಹವಿರುವ ಬಾವುಟೆ ಕಟ್ಟೆ ಸಮೀಪದ ಗುಡ್ಡಕ್ಕೆ ಸುರಂಗ ಮಾರ್ಗ ನಿರ್ಮಿಸುವ ಕಾಮಗಾರಿ ಕಳೆದ ಎರಡ್ಮೂರು ವರ್ಷಗಳಿಂದ ಪ್ರಗತಿಯಲ್ಲಿದೆ. ಈ ಬೃಹತ್ ಗುಡ್ಡದ ಅಡಿಯಿಂದ ಚತುಷ್ಪಥ ಹೆದ್ದಾರಿ ಹಾದು ಹೋಗುತ್ತಿದ್ದು, ದ್ವಿಪಥ ವಿಸ್ತೀರ್ಣದ ರಸ್ತೆ ನಿರ್ಮಾಣಕ್ಕಾಗಿ ಅರ್ಧ ಕಿ.ಮೀ. ಉದ್ದದ ಎರಡು ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಅದೇ ರೀತಿ ಬಿಣಗಾದಿಂದ ಅಲಿಗದ್ದಾವರೆಗೆ ಸುಮಾರು ಅರ್ಧ ಕಿ.ಮೀ. ಉದ್ದದ 2 ಸುರಂಗಗಳು ನಿರ್ಮಾಣವಾಗುತ್ತಿವೆ.
ಸುರಂಗ ಮಾರ್ಗ ಮುಕ್ತಾಯವಾದ ಮೇಲೆ ನೇರವಾಗಿ ಕಾರವಾರದ ಲಂಡನ್ ಸೇತುವೆ ಬಳಿಯಿಂದ ಬಿಣಗಾ ಸಂಪರ್ಕ ಸಾಧ್ಯವಾಗಲಿದೆ. ಆದರೆ, ಬಿಣಗಾದಿಂದ ಅಲಿಗದ್ದಾವರಗೆ ನಿರ್ಮಾಣವಾಗುತ್ತಿರುವ ಎರಡು ಸುರಂಗ ಮಾರ್ಗಗಳ ಪೈಕಿ ಒಂದು ಪೂರ್ಣಗೊಂಡಿದ್ದು, ಇನ್ನೊಂದಕ್ಕೆ ಮಳೆ ಅಡ್ಡಿಯಾಗಿದೆ. ಮಳೆಯಿಂದ ಹರಿದುಬರುವ ಝರಿ ನೀರು ಸುರಂಗದ ಒಳ ಭಾಗದಲ್ಲಿ ಸಂಗ್ರಹವಾಗುತ್ತಿದ್ದು, ಇದು ಹರಿದು ಹೋಗಲು ಜಾಗವಿಲ್ಲದಂತಾಗಿದೆ. ಇದರಿಂದ ಕಾಮಗಾರಿ ನಡೆಸಲು ಅವಶ್ಯವಿರುವ ವಾಹನಗಳ ಹಾಗೂ ಕಾರ್ಮಿಕರ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಲ್ಲದೆ ಮುಂಜಾಗೃತ ಕ್ರಮವಾಗಿ ಗುಡ್ಡದ ಹೊರಗಿನಿಂದ ಸುಂರಂಗದ ದ್ವಾರಕ್ಕೆ ಮಳೆ ನೀರು ಹರಿದುಬರದಂತೆ ಭಾರಿ ಪ್ರಮಾಣದಲ್ಲಿ ಮಣ್ಣು ತುಂಬಲಾಗಿದೆ.
ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಸುರಂಗ ಮಾರ್ಗ ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ಬಂಡೆಗಲ್ಲುಗಳ ಸ್ಫೋಟದಿಂದಾಗಿ ಈ ಭಾಗದ ಭೂಮಿ ಸಾಕಷ್ಟು ಭಾರಿ ಅಲುಗಾಡಿದೆ. ಈಗಾಗಲೇ ಸುರಂಗದೊಳಗೆ ಅಲ್ಲಲ್ಲಿ ಕುಸಿತವಾಗಿದೆ ಎನ್ನಲಾಗ್ತಿದೆ. ಸುರಂಗದ ಎರಡೂ ಬದಿಗಳಲ್ಲಿ ಸಾಕಷ್ಟು ಮನೆಗಳಿದ್ದು, ಈಗಾಗಲೇ ಅಲುಗಾಡಿರುವ ಗುಡ್ಡ ಕುಸಿಯುವ ಆತಂಕವಿದೆ. ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
Click this button or press Ctrl+G to toggle between Kannada and English