ಮಂಗಳೂರು : 2008ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಚರ್ಚ್ ದಾಳಿಯ ವೇಳೆ ಪ್ರತಿಭಟಿಸಿದ್ದ ಹಾಗೂ ಕ್ರೈಸ್ತರ ಮೇಲೆ ದಾಖಲಿಸಲಾಗಿದ್ದ 23 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್ ವರಿಷ್ಠರಿಗೆ ತಮ್ಮ ಅಹವಾಲು ಸಲ್ಲಿಸಿದ್ದರೂ ಅಮಾಯಕರ ಮೇಲಿನ ಪ್ರಕರಣಗಳನ್ನು ಸರಕಾರ ಹಿಂದಕ್ಕೆ ಪಡೆದಿರಲಿಲ್ಲ.
ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ಈ ನಿರ್ಧಾರವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಎಲೋಶಿಯಸ್ ಪಾವ್ಲ್ ಡಿ’ಸೋಜಾ ಅವರು ಸ್ವಾಗತಿಸಿದ್ದಾರೆ, ಚರ್ಚ್ ದಾಳಿಯ ಪ್ರಕರಣದಿಂದ ಅಪರಾಧಿಗಳ ಜೊತೆ ಅನೇಕ ಮಂದಿ ನಿರಪರಾದಿ ಕ್ರೈಸ್ತರು ಕಷ್ಟ ನಷ್ಟಕ್ಕೆ ಸಿಲುಕಿ ಕೋರ್ಟು ಕಚೇರಿ ಅಲೆದಾಡಬೇಕಾಗಿ ಬಂದಿದ್ದು, ಇದರಿಂದ ಅವರು ತಮ್ಮ ಭವಿಷ್ಯದ ಬಗೆಗೂ ಚಿಂತಿತರಾಗಿದ್ದರು. ಇದೀಗ ತಮ್ಮ ಮನವಿಗೆ ರಾಜ್ಯ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದು ಸ್ವಾಗತಾರ್ಹ ಎಂದ ಅವರು ತಿಳಿಸಿದ್ದಾರೆ.
ಇದಕ್ಕಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮತ್ತು ಸಂಬಂಧ ಪಟ್ಟ ಸಚಿವ ಸಂಪುಟದ ಎಲ್ಲ ಸದಸ್ಯರನ್ನು ಧರ್ಮ ಪ್ರಾಂತ್ಯದ ಸಮಸ್ತ ಕ್ರೈಸ್ತ ಬಾಂಧವರ ಪರವಾಗಿ ಅವರು ಅಭಿನಂದಿಸಿದ್ದಾರೆ. ಸಚಿವ ಸಂಪುಟದ ತೀರ್ಮಾನದ ಬಗ್ಗೆ ಅತಿ ಶೀಘ್ರದಲ್ಲಿ ಸರಕಾರಿ ಆದೇಶ ಪ್ರಕಟವಾಗಬೇಕು ಮತ್ತು ಕಾರ್ಯರೂಪಕ್ಕೆ ಬರಬೇಕು. ಈ ಮೂಲಕ ಪ್ರಕರಣ ಎದುರಿಸುತ್ತಿರುವವರು ನೆಮ್ಮದಿಯಿಂದ ಬದುಕುವಂತಾಗಬೇಕು ಎಂದು ಧರ್ಮಾಧ್ಯಕ್ಷರು ಮನವಿ ಮಾಡಿದ್ದಾರೆ.
ಕ್ರೈಸ್ತ ಕರ್ನಾಟಕ ಕ್ರೈಸ್ತ ಸಂಘಗಳ ಅಂತಾರಾಷ್ಟ್ರೀಯ ಒಕ್ಕೂಟ ದ ಅಧ್ಯಕ್ಷ ರೊನಾಲ್ಡ್ ಕುಲಾಸೊ ಅವರು ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ, ಕಾನೂನು ಸಚಿವ ಸುರೇಶ್ ಕುಮಾರ್, ಗೃಹ ಸಚಿವ ಆರ್. ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಡಾ| ವಿ.ಎಸ್. ಆಚಾರ್ಯ, ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.