ಮಂಗಳೂರು: ಇತ್ತೀಚೆಗೆ ಮೀನುಗಳಿಗೆ ರಾಸಾಯನಿಕ ಸಿಂಪಡಿಸಿ ತಾಜಾವಾಗಿಡಲಾಗುತ್ತಿದೆ ಎಂಬ ಸುದ್ದಿಗಳು ಹರಡುತ್ತಿರುವುದರಿಂದ ಕರಾವಳಿಯಲ್ಲಿ ಮೀನು ಪ್ರೀಯರು ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೀನಿನ ತಾಜಾತನ ಕಾಪಾಡುವುದಕ್ಕೆ “ಫಾರ್ಮಾಲಿನ್’ ಅಥವಾ “ಅಮೋನಿಯಾ’ ರಾಸಾಯನಿಕ ವಸ್ತುಗಳನ್ನು ಪತ್ತೆ ಹಚ್ಚುವ ಕಿಟ್ ಇದೀಗ ಮಂಗಳೂರಿಗೂ ಬಂದಿದೆ.
ಈ ಕಿಟ್ ಅನ್ನು ಕೇರಳದ ಕೊಚ್ಚಿಯಲ್ಲಿರುವ ಕೇಂದ್ರ ಮೀನುಗಾರಿಕೆ ತಂತ್ರಜ್ಞಾನ ಸಂಸ್ಥೆಯಿಂದ ತರಿಸಿಕೊಳ್ಳಲಾಗಿದೆ. ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳಿಗೆ ಈ ಕಿಟ್ ಹಸ್ತಾಂತರಿಸಲಾಗಿದ್ದು ಮಾರುಕಟ್ಟೆ ಪ್ರದೇಶದಲ್ಲಿ, ಮೀನು ಮಾರಾಟವಾಗುವ ಜಾಗಗಳಲ್ಲಿ ರಾಸಾಯನಿಕ ಮಿಶ್ರಣ ಕುರಿತಂತೆ ತಪಾಸಣೆ ನಡೆಸಲಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅದರಲ್ಲಿಯೂ ಮೀನು ಪ್ರಿಯರು, ತಾವು ಖರೀದಿಸುವ ಮೀನಿನಲ್ಲಿ ರಾಸಾಯನಿಕ ಪದಾರ್ಥ ಬೆರೆಸಿರುವ ಬಗ್ಗೆ ಅನುಮಾನ ಉಂಟಾದರೆ ನಗರದ ಎಕ್ಕೂರಿನಲ್ಲಿರುವ ಮೀನುಗಾರಿಕಾ ಕಾಲೇಜಿನಲ್ಲಿ ಗುಣಮಟ್ಟ ಪರೀಕ್ಷಿಸಿ ಕೊಳ್ಳಬಹುದಾಗಿದೆ.
ಇನ್ನೂ ಈ ಮೀನುಗಾರಿಕೆ ನಿಷೇಧ ಮಾಡಿದ ಅವಧಿಯಲ್ಲಿ ಹೊರರಾಜ್ಯಗಳಿಂದ ಬರುವ ಮೀನುಗಳಲ್ಲಿ ಕ್ಯಾನ್ಸರ್ ಕಾರಕ ಫಾರ್ಮಾಲಿನ್ ರಾಸಾಯನಿಕ ಅಂಶವಿದೆ ಎಂಬ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ಕರಾವಳಿಯಲ್ಲೂ ಆತಂಕ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ಕಾಲೇಜಿನ ತಂಡವು ಕೊಚ್ಚಿಗೆ ತೆರಳಿ ಕಿಟ್ ಅನ್ನು ಮಂಗಳೂರಿಗೆ ತಂದಿದೆ.
ಸಿಐಎಫ್ಟಿ ಅಭಿವೃದ್ಧಿ ಪಡಿಸಿರುವ ಈ ತಂತ್ರಜ್ಞಾನ ಆಧಾರಿತ ಕಿಟ್‌ನಲ್ಲಿ ಒಂದು ಸ್ಲೈಡ್ ಇದೆ. ಪ್ರಯೋಗಕ್ಕೆ ಒಳಪಡಿಸಲಿರುವ ಮೀನನ್ನು ಈ ಪಟ್ಟಿ ಮತ್ತು ದ್ರಾವಣದ ಸಂಯೋಗಕ್ಕೆ ಒಳಪಡಿಸಿದಾಗ ಎರಡು ನಿಮಿಷದೊಳಗೆ ಈ ಪಟ್ಟಿಯಲ್ಲಿ ಬಣ್ಣ ಬದಲಾಗುವುದನ್ನು ಆಧರಿಸಿ ಆ ಮೀನಿನಲ್ಲಿ ಫಾರ್ಮಾಲಿನ್ ಅಥವಾ ಅಮೋನಿಯಾ ಅಂಶ ವಿದೆಯೇ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಮೀನುಗಾರಿಕಾ ಇಲಾಖೆ ಸಹಾಯಕ ಉಪ ನಿರ್ದೇಶಕರಾದ ಮಂಜುಳಾ ಶೆಣೈ ತಿಳಿಸಿದ್ದಾರೆ.
Click this button or press Ctrl+G to toggle between Kannada and English