ಮಂಗಳೂರು: ಒಂದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಮತ್ತೊಂದು ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೆನೆಗುದಿಗೆ ಬೀಳುತ್ತವೆ ಎಂಬ ಸಾರ್ವಜನಿಕರ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಈ ಪ್ರಕರಣ ಸಾಕ್ಷಿಯಾಗುತ್ತಿದೆ. ನೆನೆಗುದಿಗೆ ಬಿದ್ದ ಅಂತಹ ಯೋಜನೆಗಳ ಪಟ್ಟಿಯಲ್ಲಿ ಈಗ ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆ ಇಂದಿರಾ ಕ್ಯಾಂಟೀನ್ ಕೂಡ ಸೇರ್ಪಡೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.
ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 10 ಇಂದಿರಾ ಕ್ಯಾಂಟೀನ್ಗಳು ಮಂಜೂರಾಗಿದ್ದವು. ಆದರೆ ಇದೀಗ ಕಾರ್ಯಾಚರಿಸುತ್ತಿರುವುದು 5 ಕ್ಯಾಂಟೀನ್ಗಳು ಮಾತ್ರ. ಮಂಜೂರಾದ 10 ಇಂದಿರಾ ಕ್ಯಾಂಟೀನ್ಗಳ ಪೈಕಿ 5 ಕ್ಯಾಂಟೀನ್ಗಳು ಮಂಗಳೂರು ನಗರವ್ಯಾಪ್ತಿಯಲ್ಲೇ ಇವೆ. ಪಂಪ್ವೆಲ್ನಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಸಹ ಕ್ಯಾಂಟೀನ್ ಆರಂಭವಾಗಿಲ್ಲ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಕಟ್ಟಡಕ್ಕೆ ಸ್ಥಳ ಗುರುತಿಸುವ ಕೆಲಸವಾಗಿದೆ ಅಷ್ಟೇ. ಇನ್ನು ಇಲ್ಲಿನ ನಿವಾಸಿಗಳು ಅದ್ಯಾವಾಗ ಕ್ಯಾಂಟೀನ್ ಆರಂಭಗೊಳ್ಳುತ್ತದೋ ಎಂದು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ.
ಇವುಗಳ ಕಥೆ ಹೀಗಾದರೆ, ಇನ್ನುಳಿದ ನಾಲ್ಕು ಇಂದಿರಾ ಕ್ಯಾಂಟೀನ್ಗಳ ನಿರ್ಮಾಣಕ್ಕೆ ಇನ್ನೂ ಮುಹೂರ್ತವೇ ಸಿದ್ಧವಾದಂತಿಲ್ಲ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜನಸಂಖ್ಯೆಯ ಆಧರಿಸಿ, ಒಟ್ಟು ಆರು ಕ್ಯಾಂಟೀನ್ ಹಾಗೂ ಅಡುಗೆ ಕೋಣೆಗಳನ್ನು ಆರಂಭಿಸಲು ನಿರ್ದೇಶನ ನೀಡಲಾಗಿತ್ತು. ಈ ಪೈಕಿ ಒಂದು ಕ್ಯಾಂಟೀನ್ ಉಳ್ಳಾಲ ನಗರಸಭೆಯ ತೊಕ್ಕೊಟ್ಟಿನಲ್ಲಿ ನಡೆಯುತ್ತಿದೆ.
ಉಳಿದವು ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿದ್ಯುತ್ ಕಂಪನಿ, ಪೊಲೀಸ್ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳಿಗೆ ಸೇರಿದ ಜಾಗಗಳಲ್ಲಿ ನಡೆಯುತ್ತಿವೆ. ಅವುಗಳನ್ನು ವರ್ಗಾವಣೆ ಪ್ರಕ್ರಿಯೆ ಇಲ್ಲದೆ ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ.
ಎಲ್ಲ ಕಟ್ಟಡಗಳನ್ನು ಕೆಆರ್ಐಡಿಎಲ್ ಮೂಲಕ 2.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಮಂಗಳೂರಿನ ಐದು ಹಾಗೂ ಉಳ್ಳಾಲದ ಇಂದಿರಾ ಕ್ಯಾಂಟೀನ್ಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಬಳಿಯಿರುವ ಇಂದಿರಾ ಕ್ಯಾಂಟೀನ್ನಲ್ಲಿಯೇ ಅಡುಗೆ ಮಾಡಿ, ಕಳುಹಿಸಲಾಗುತ್ತಿದೆ.
ರಾಜ್ಯದ ಎಲ್ಲಾ ಭಾಗದ ಜನತೆಯ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ಮಂಗಳೂರು ಹೊರತುಪಡಿಸಿದರೆ ಇನ್ನುಳಿದ ಕಡೆಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯೂ ಆರಂಭವಾಗದಿರುವುದು ವಿಪರ್ಯಾಸ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
Click this button or press Ctrl+G to toggle between Kannada and English