ಮಂಗಳೂರು: ಕಳೆದ ಒಂದು ತಿಂಗಳಲ್ಲಿ ಫುಟ್ಬಾಲ್ ಕ್ರೀಡೆಯ ಕ್ರೇಝ್ ಹೆಚ್ಚಿದೆ. ಫಿಫಾ ವಿಶ್ವಕಪ್ ಮುಗಿದಿದ್ದರೂ ದೇಶ-ವಿದೇಶಗಳಲ್ಲಿ ಈಗ ಫುಟ್ಬಾಲ್ನದ್ದೇ ಮಾತು ಕೇಳಿಬರ್ತಿದೆ. ಅದರಲ್ಲೂ ಸ್ಟ್ರೀಟ್ ಫುಟ್ಬಾಲ್ ಅಂತೂ ಅತ್ಯಂತ ಜನಪ್ರಿಯತೆ ಗಳಿಸಿದೆ. ವಿಶ್ವದ ವಿವಿಧ ದೇಶಗಳಲ್ಲಿ ಜನಪ್ರಿಯವಾಗಿರುವ ಸ್ಟ್ರೀಟ್ ಫುಟ್ಬಾಲ್ ಈಗ ಮಂಗಳೂರಿಗೂ ಕಾಲಿರಿಸಿದೆ.
ಹೌದು.. ಮಂಗಳೂರಿನ ಅಳಕೆ ಪ್ರದೇಶದಲ್ಲಿ ಸ್ಟ್ರೀಟ್ ಫುಟ್ಬಾಲ್ ಕ್ರೀಡಾಂಗಣವೊಂದು ಸದ್ದಿಲ್ಲದಂತೆ ನಿರ್ಮಾಣಗೊಂಡಿದೆ.
ಅಂದಹಾಗೆ ಸ್ಟ್ರೀಟ್ ಫುಟ್ಬಾಲ್ ಎನ್ನುವುದು ಫುಟ್ಬಾಲ್ ನದ್ದೇ ತದ್ರೂಪ. ರಸ್ತೆ ಬದಿ ಆಡುತ್ತಿದ್ದ ಫುಟ್ಬಾಲ್ ಕ್ರಮೇಣ ಸ್ಟ್ರೀಟ್ ಫುಟ್ಬಾಲ್ ಆಗಿ ಜನಪ್ರಿಯಗೊಂಡಿದೆ. ಒಂದು ಸಣ್ಣ ಮೈದಾನ, ತಂಡದಲ್ಲಿ 5 ರಿಂದ 7 ಮಂದಿ ಸದಸ್ಯರನ್ನು ಒಳಗೊಂಡಿರುವ ಕ್ರೀಡೆಗೇ ಹೀಗೆಯೇ ಎಂದು ಯಾವುದೇ ನಿಯಮಾವಳಿಗಳಿಲ್ಲ. ಮನರಂಜನೆಯ ಜೊತೆಗೆ ಉತ್ತಮ ದೈಹಿಕ ವ್ಯಾಯಾಮವೂ ಈ ಮೂಲಕ ದೊರೆಯುತ್ತದೆ.
ಮಂಗಳೂರಿನ ಅಳಕೆ ಬಳಿ ರಸ್ತೆ ಬದಿಯಲ್ಲಿ 10 ಸಾವಿರ ಅಡಿ ವಿಸ್ತೀರ್ಣದಲ್ಲಿ ಫಿಫಾ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಇದಕ್ಕೆ ಫ್ರಾನ್ಸ್ ನಿಂದ ಆಮದು ಮಾಡಿಕೊಳ್ಳಲಾದ ಕೃತಕ ಟರ್ಫ್ ಅಳವಡಿಸಲಾಗಿದೆ. ಈ ಮೂಲಕ ಆಟಗಾರರು ಎಷ್ಟು ಬಾರಿ ಜಾರಿ ಬಿದ್ದರೂ ಗಾಯವಾಗದಂತಹ ಹುಲ್ಲುಹಾಸಿನ ಮೈದಾನ ಸಜ್ಜುಗೊಂಡಿದೆ.
ಕ್ರೀಡಾಂಗಣದ ಜೊತೆಗೆ ಬಟ್ಟೆ ಬದಲಾಯಿಸಲು ಕೊಠಡಿ, ಪಾರ್ಕಿಂಗ್ ಸೌಲಭ್ಯ ಒದಗಿಸಲಾಗಿದೆ. ಕ್ರೀಡಾಂಗಣಕ್ಕೆ ಕೊಂಚ ಇಳಿಜಾರಾಗಿ ಸಿಮೆಂಟ್ ಬೆಡ್ ಅಳವಡಿಸಿ, ಮೇಲ್ಭಾಗದಲ್ಲಿ ಟರ್ಫ್ ಅಳವಡಿಸಲಾಗಿದೆ. ಈ ಮೂಲಕ ಮಳೆಗಾಲದಲ್ಲಿ ಕ್ರೀಡಾಂಗಣದ ನೀರು ಒಳಗೆ ನಿಲ್ಲದೆ ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಲಾಗಿದೆ. ಮೈದಾನದ ಸುತ್ತಲೂ ನೆಟ್ ವ್ಯವಸ್ಥೆ ಮಾಡಲಾಗಿದೆ.
ಈ ಸ್ಟ್ರೀಟ್ ಫುಟ್ಬಾಲ್ ಸ್ಟೇಡಿಯಂನ ರೂವಾರಿ ಫರ್ಫೆಕ್ಸ್ ಪಾಸ್ ಎಂಬ ಸಂಸ್ಥೆ. ಮಂಗಳೂರಿನಲ್ಲಿ ಫುಟ್ಬಾಲ್ ಕ್ರೀಡೆಗೆ ಸೂಕ್ತ ಅವಕಾಶ ಇಲ್ಲದಿರುವುದನ್ನು ಮನಗಂಡ ಮೂವರು ಯುವಕರು ಈ ಸಂಸ್ಥೆಯ ಮೂಲಕ ಸ್ಟ್ರೀಟ್ ಫುಟ್ಬಾಲ್ಗೆ ಅವಕಾಶ ಒದಗಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಮಾರ್ಕಿಂಗ್ನಂತಹ ಕೆಲವೇ ಪುಟ್ಟ ಕೆಲಸಗಳು ಬಾಕಿಯಾಗಿವೆ. ಈಗಾಗಲೇ ಕೆಲವು ತಂಡಗಳು ಇಲ್ಲಿ ಹೆಸರು ನೋಂದಾಯಿಸಿಕೊಂಡು ಆಟವಾಡುತ್ತಿವೆ. ಶೀಘ್ರವೇ ಇಲ್ಲೊಂದು ಫುಟ್ಬಾಲ್ ಕೋಚಿಂಗ್ ಸೆಂಟರ್ ತೆರೆಯುವ ಯೋಚನೆ ಪರ್ಫೆಕ್ಟ್ ಪಾಸ್ ಸಂಸ್ಥೆಗಿದೆ. ಈ ಮೂಲಕ ಮಂಗಳೂರಿನಲ್ಲೂ ಸ್ಟ್ರೀಟ್ ಫುಟ್ಬಾಲ್ ನ್ನು ಜನಪ್ರಿಯಗೊಳಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ.
Click this button or press Ctrl+G to toggle between Kannada and English