ಮಂಗಳೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶದ ಜನರಿಗೆ ನೀಡಿದ್ದ ಭರವಸೆಗಳನ್ನು ಬಿಜೆಪಿ ಈಡೇರಿಸಿಲ್ಲ. ಬಿಜೆಪಿ ಎಂದರೆ ಭಾರತೀಯ ಜೂಟ್ (ಸುಳ್ಳು) ಪಾರ್ಟಿ ಎಂದು ಮಾಜಿ ಸಚಿವ ರಮಾನಾಥ್ ರೈ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಲೋಕ ಸಭಾ ಚುನಾವಣೆ ಸಂದರ್ಭದಲ್ಲಿ ದೇಶದ ಹೊರಗಿರುವ ಕಪ್ಪು ಹಣವನ್ನು ತರುವುದಾಗಿ ಬಡಾಯಿ ಕೊಚ್ಚಿದ್ದ ನರೇಂದ್ರ ಮೋದಿ ಅವರು ಈವರೆಗೆ ಕಪ್ಪುಹಣ ತಂದಿಲ್ಲ ಎಂದರು.
ಕಪ್ಪು ಹಣ ತಂದರೆ ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರುಪಾಯಿ ಹಾಕುವುದಾಗಿ ಮೋದಿ ತಿಳಿಸಿದ್ದರು. ಆದರೆ ಈ ವರೆಗೆ ಒಂದು ನಯಾಪೈಸೆ ಜನರ ಖಾತೆಗೆ ಬಂದಿಲ್ಲ. ಈ ಹಿಂದೆ ಶೇಕಡಾ 44ರಷ್ಟಿದ್ದ ಕಪ್ಪು ಹಣ ಈಗ ಶೇಕಡಾ 88ಕ್ಕೆ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಮೋದಿ ಅವರು 15 ಲಕ್ಷದ ಬದಲು ಜನರ ಖಾತೆಗೆ 30 ಲಕ್ಷ ಹಾಕಬೇಕು ಎಂದು ವ್ಯಂಗ್ಯವಾಡಿದರು.
ಕೇಂದ್ರ ಸರಕಾರ ಎಲ್ಲ ಕ್ಷೇತ್ರಗಳಲ್ಲಿ ವೈಫಲ್ಯ ಕಂಡಿದೆ. ದೇಶದಲ್ಲಿ ಪೆಟ್ರೋಲ್, ಅಡುಗೆ ಅನಿಲ ದರ ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ. ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿವೆ. ಇದು ದೇಶದ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಕೇಂದ್ರದ ಜನ್ ಧನ್ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಖಾತೆ ತೆರೆಯಲಾಗಿದೆ? ಎಷ್ಟು ಜನರಿಗೆ ಸಾಲ ನೀಡಲಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸವಾಲು ಹಾಕಿದರು.
ರಾಷ್ಟ್ರೀಯ ಹೆದ್ದಾರಿಗಳು ಹದಗೆಟ್ಟಿವೆ. ಮಂಗಳೂರಿನ ಪಂಪ್ ವಲ್ , ತೊಕ್ಕೊಟಿನ ಫ್ಲೈ ಓವರ್ ಗಳ ಕಾಮಗಾರಿ ಸ್ಥಗಿತಗೊಂಡಿದ್ದು, ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಬಿಜೆಪಿ ಕೇವಲ ಪ್ರಚಾರಕ್ಕಾಗಿ ಗಿಮಿಕ್ ಮಾಡುತ್ತಾ ಕಾಲ ಕಳೆಯುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅನ್ನು ಮುಸ್ಲಿಮರ ಪಕ್ಷ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿ ಆ ರೀತಿ ಹೇಳಿಕೆ ನೀಡಲ್ಲ. ಇದೊಂದು ಷಡ್ಯಂತ್ರ ಎಂದು ಅವರು ಹೇಳಿದರು. ಕಾಂಗ್ರೆಸ್ ಎಲ್ಲ ಜಾತಿ, ಧರ್ಮ, ಮತ, ಪಂಥ ಗಳ ಏಳಿಗೆಗೆ ದುಡಿಯುವ ಪಕ್ಷ. ನಮಗೆ ಹಿಂದೂಗಳ ಮತ ಬೇಡ ಎಂದು ಯಾರೂ ಹೇಳುವುದಿಲ್ಲ ಎಂದು ಹೇಳಿದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತ. ಮುಂದಿನ ಲೋಕ ಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚಿಂತಿಸಿಲ್ಲ. ಇದು ಪಕ್ಷದ ಹಿರಿಯರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
Click this button or press Ctrl+G to toggle between Kannada and English